ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನ

Update: 2020-10-29 15:22 GMT

ಗಾಂಧಿನಗರ, ಅ.29: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ (92 ವರ್ಷ) ಗುರುವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಚಿಕಿತ್ಸೆ ಪಡೆದಿದ್ದರು. ಗುರುವಾರ ಬೆಳಿಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಬಿಜೆಪಿಯಿಂದ ಗುಜರಾತ್ ವಿಧಾನಸಭೆಗೆ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪಟೇಲ್ 1995ರಲ್ಲಿ ಮತ್ತು 1998ರಿಂದ 2001ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಬಿಜೆಪಿ ತೊರೆದಿದ್ದ ಪಟೇಲ್ ಹೊಸ ಪಕ್ಷ ಗುಜರಾತ್ ಪರಿವರ್ತನ ಪಕ್ಷವನ್ನು ಸ್ಥಾಪಿಸಿದ್ದರು. 2012ರ ವಿಧಾನಸಭೆ ಚುನಾವಣೆಯಲ್ಲಿ ಪಟೇಲ್ ಗೆದ್ದಿದ್ದರೂ ಅವರ ಪಕ್ಷ ಕಳಪೆ ಸಾಧನೆ ಮಾಡಿತ್ತು. 2014ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರಲ್ಲದೆ, ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News