ಜಮ್ಮು-ಕಾಶ್ಮೀರದ ಪಕ್ಷಗಳು, ಪತ್ರಕರ್ತರಿಂದ ಎನ್‌ಐಎ ದಾಳಿಗೆ ಖಂಡನೆ

Update: 2020-10-29 15:35 GMT

ಶ್ರೀನಗರ,ಅ.29: ಇಂಗ್ಲಿಷ್ ದೈನಿಕ ‘ಗ್ರೇಟರ್ ಕಾಶ್ಮೀರ’ ಕಚೇರಿಗಳು ಮತ್ತು ಹಿರಿಯ ಪತ್ರಕರ್ತರ ನಿವಾಸಗಳು ಸೇರಿದಂತೆ ಕಾಶ್ಮೀರ ಕಣಿವೆಯ ವಿವಿಧ ಕಡೆಗಳಲ್ಲಿ ಎನ್‌ಐಎ ದಾಳಿಗಳಿಗಾಗಿ ಕಾಶ್ಮೀರದಲ್ಲಿಯ ರಾಜಕೀಯ ಪಕ್ಷಗಳ ನಾಯಕರು ಮತ್ತು ಪತ್ರಕರ್ತರು ಗುರುವಾರ ಕೇಂದ್ರ ಸರಕಾರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿದರು.

ಬುಧವಾರ ಶ್ರೀನಗರ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ 10 ಕಡೆ ದಾಳಿಗಳನ್ನು ನಡೆಸಿದ್ದ ಎನ್‌ಐಎ,ಪತ್ರಕರ್ತರು,ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರತ್ಯೇಕತಾವಾದಿ ನಾಯಕರೋರ್ವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುತ್ತಿರುವುದಕ್ಕಾಗಿ ಜಮ್ಮು-ಕಾಶ್ಮೀರದ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪಿಡಿಪಿ, ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿವೆ.

ಈ ದಾಳಿಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯಗಳ ಮೇಲೆ ಭಾರತ ಸರಕಾರದ ಪ್ರಹಾರದ ಉದಾಹರಣೆಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿಕಾರಿದರೆ,ದಾಳಿಗಳು ಮಾಧ್ಯಮ ಸ್ವಾತಂತ್ರವನ್ನು ಮತ್ತು ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುತ್ತಿರುವ ಗುಂಪುಗಳನ್ನು ದಮನಿಸುವ ಪ್ರಯತ್ನವಾಗಿದೆ ಎಂದು ಅನಾಮಿಕರಾಗಿರಲು ಬಯಸಿದ ಇನ್ನೋರ್ವ ಪಿಡಿಪಿ ನಾಯಕರು ಹೇಳಿದರು.

ಎನ್‌ಐಎ ದಾಳಿಗಳಿಂದ ಹಿಡಿದು ಕಚೇರಿಗಳ ಲಾಕ್‌ಡೌನ್‌ವರೆಗೆ ಕಾಶ್ಮೀರದ ಮಾಧ್ಯಮಗಳು ಈ ಹಿಂದೆಂದೂ ಈಗಿನಷ್ಟು ಒತ್ತಡದಲ್ಲಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ವಿವೇಚನಾಯುತ ಧ್ವನಿಗಳನ್ನು ಅಡಗಿಸಲಾಗುತ್ತಿದೆ ಮತ್ತು ಈ ಸರಕಾರವು ಯಾವುದೇ ನಾಚಿಕೆಯಿಲ್ಲದೆ ಈ ಅಭಿಯಾನವನ್ನು ನಡೆಸುತ್ತಿದೆ ಎಂದು ಎನ್‌ಸಿ ವಕ್ತಾರ ಇಮ್ರಾನ್ ದಾರ್ ಟ್ವೀಟಿಸಿದ್ದಾರೆ.

ಕಾಶ್ಮೀರದಲ್ಲಿ ಪತ್ರಕರ್ತರಾಗಿರುವುದು ತುಂಬ ದುಬಾರಿಯಾಗುತ್ತಿರುವ ಬಗ್ಗೆ ತಾನು ಕಳವಳಗೊಂಡಿದ್ದೇನೆ ಎಂದಿರುವ ಕಾಶ್ಮೀರ ಎಡಿಟರ್ಸ್ ಗಿಲ್ಡ್,ಸುದೀರ್ಘ ಸಮಯದಿಂದ ಸರಕಾರ ಮತ್ತು ಸರಕಾರೇತರ ಶಕ್ತಿಗಳು ಕಾಶ್ಮೀರಿ ಮಾಧ್ಯಮಗಳ ವಿರುದ್ಧ ದಾಳಿಗಳನ್ನು ನಡೆಸುತ್ತಿವೆ ಎಂದಿದೆ. ಕಾಶ್ಮೀರಿ ಮಾಧ್ಯಮಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂಬ ಆಶಯವನ್ನು ಅದು ವ್ಯಕ್ತಪಡಿಸಿದೆ.

ಪತ್ರಕರ್ತರ ನಿವಾಸಗಳ ಮೇಲೆ ದಾಳಿಗಳಿಗೂ ಅವರ ಕೆಲಸಕ್ಕೂ ಸಂಬಂಧವಿಲ್ಲ ಎಂದಿರುವ ಎನ್‌ಐಎ ಅಧಿಕಾರಿಗಳು,ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಬೆಂಬಲಿಸಲು ಭಾರತ ಮತ್ತು ವಿದೇಶಗಳಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ಅ.8ರಂದು ತಾನು ದಾಖಲಿಸಿಕೊಂಡಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರ ಟೈಮ್ಸ್‌ನ ಸಂಪಾದಕಿ ಅನುರಾಧಾ ಭಾಸಿನ್ ಅವರು ಎನ್‌ಎಐ ಕ್ರಮವನ್ನು ಕಾಶ್ಮೀರದಲ್ಲಿಯ ಮಾಧ್ಯಮಗಳ ವಿರುದ್ಧ ನಿರ್ಬಂಧಗಳ ಭಾಗವಾಗಿದೆ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News