ಪಾಕ್ ಸೇನಾ ಮುಖ್ಯಸ್ಥರ ಕಾಲುಗಳು ನಡುಗುತ್ತಿದ್ದವು: ಅಭಿನಂದನ್ ಪ್ರಕರಣದ ಬಗ್ಗೆ ಪಾಕ್ ಪ್ರತಿಪಕ್ಷ ಸಂಸದರ ಹೇಳಿಕೆ

Update: 2020-10-29 16:11 GMT
ಫೈಲ್ ಚಿತ್ರ

ಇಸ್ಲಾಮಾಬಾದ್ (ಪಾಕಿಸ್ತಾನ), ಅ. 29: ಭಾರತ ನಮ್ಮ ದೇಶದ ಮೇಲೆ ದಾಳಿ ಮಾಡುವುದರಲ್ಲಿದೆ ಎಂಬುದಾಗಿ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಸಂಸದೀಯ ನಾಯಕರ ಸಭೆಯೊಂದರಲ್ಲಿ ಹೇಳಿದಾಗ, ದೇಶದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಾಜ್ವಾರ ಕಾಲುಗಳು ನಡುಗುತ್ತಿದ್ದವು ಎಂದು ಪಾಕಿಸ್ತಾನದ ಸಂಸದ ಅಯಾಝ್ ಸಾದಿಕ್ ಹೇಳಿದ್ದಾರೆ.

ಅದೇ ಸಭೆಯಲ್ಲಿ, ಬಂಧಿತ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ಇಮ್ರಾನ್ ಖಾನ್ ಸರಕಾರ ನಿರ್ಧರಿಸಿತು.

 ಪಾಕಿಸ್ತಾನದ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ ಬುಧವಾರ ಮಾಡಿದ ಭಾಷಣದಲ್ಲಿ ಅವರು, 2019ರ ಫೆಬ್ರವರಿಯಲ್ಲಿ ನಡೆದ ಘಟನಾವಳಿಗಳನ್ನು ಈ ರೀತಿಯಾಗಿ ಸ್ಮರಿಸಿಕೊಂಡಿದ್ದಾರೆ.

ವಿಂಗ್ ಕಮಾಂಡರ್ ವರ್ಧಮಾನ್‌ರನ್ನು ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ, ಭಾರತ ಅಂದು ರಾತ್ರಿ 9 ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ ಎಂಬುದಾಗಿ ಆ ಸಭೆಯಲ್ಲಿ ಖುರೇಶಿ ಹೇಳಿದರು ಎಂದು ಪ್ರತಿಪಕ್ಷ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್) ನಾಯಕ ಅಯಾಝ್ ಸಂಸತ್ತಿನಲ್ಲಿ ಹೇಳಿದರು.

ವರ್ಧಮಾನ್‌ರನ್ನು ಬಿಡುಗಡೆ ಮಾಡುವಂತೆ ಪ್ರತಿಪಕ್ಷ ನಾಯಕರು ಮತ್ತು ಸೇನಾ ಮುಖ್ಯಸ್ಥರು ಭಾಗವಹಿಸಿದ ಆ ಸಭೆಯಲ್ಲಿ ಮಹ್ಮೂದ್ ಸೂಚಿಸಿದರು ಎಂದರು.

‘‘ನನಗೆ ನೆನಪಿದೆ... ಶಾ ಮಹ್ಮೂದ್ ಖುರೇಶಿ ಸಭೆಯಲ್ಲಿದ್ದರು. ಆ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಸಭೆ ನಡೆಯುತ್ತಿದ್ದ ಕೋಣೆಗೆ ಬಂದರು. ಅವರ ಕಾಲುಗಳು ನಡುಗುತ್ತಿದ್ದವು ಹಾಗೂ ಅವರು ಬೆವರುತ್ತಿದ್ದರು. ವಿದೇಶ ಸಚಿವರು ಹೇಳಿದರು- ಅಭಿನಂದನ್ ವಾಪಸ್ ಹೋಗಲಿ. ಭಾರತವು ರಾತ್ರಿ 9 ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ’’ ಎಂದು ಅಯಾಝ್ ಹೇಳಿರುವುದಾಗಿ ‘ದುನಿಯ ನ್ಯೂಸ್’ ವರದಿ ಮಾಡಿದೆ.

ಪುಲ್ವಾಮ ಭಯೋತ್ಪಾದಕ ದಾಳಿ ಸಂಘಟಿಸಿದ್ದು ಪಾಕಿಸ್ತಾನ: ಪಾಕ್ ಸಚಿವ

► ಬಳಿಕ ಹೇಳಿಕೆ ಬದಲು!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ವರ್ಷ ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ್ದು ಪಾಕಿಸ್ತಾನ ಎಂದು ಪಾಕಿಸ್ತಾನದ ಸಚಿವ ಫಾವದ್ ಚೌಧರಿ ದೇಶದ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ ಹೇಳಿದ್ದಾರೆ.

ಆ ಮೂಲಕ, ಭಾರತದಲ್ಲಿ ನಡೆಯುವ ಭಯೋತ್ಪಾದನೆ ಕೃತ್ಯಗಳನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ ಎನ್ನುವುದನ್ನು ಆ ದೇಶದ ಸಚಿವರೇ ಒಪ್ಪಿಕೊಂಡಂತಾಗಿದೆ. ಆದರೆ, ಬಳಿಕ ಅವರು ತನ್ನ ಹೇಳಿಕೆಯನ್ನು ಬದಲಿಸಿದ್ದಾರೆ.

ಪುಲ್ವಾಮ ದಾಳಿಯಲ್ಲಿ ಭಾರತದ 50 ಯೋಧರು ಹುತಾತ್ಮರಾಗಿದ್ದಾರೆ.

‘‘ನಾವು ಭಾರತದ ಒಳಹೊಕ್ಕು ದಾಳಿ ನಡೆಸಿದೆವು. ಪುಲ್ವಾಮದಲ್ಲಿ ನಾವು ಪಡೆದ ಯಶಸ್ಸು ಇಮ್ರಾನ್ ಖಾನ್ ನಾಯಕತ್ವದಲ್ಲಿ ದೇಶದ ಜನರಿಗೆ ಸಿಕ್ಕ ಯಶಸ್ಸಾಗಿದೆ. ನೀವು ಮತ್ತು ನಾವು ಎಲ್ಲರೂ ಈ ಯಶಸ್ಸಿನ ಭಾಗೀದಾರಿಗಳು’’ ಎಂದು ಸಚಿವರು ಹೇಳಿದರು.

ಆದರೆ, ಈ ಹೇಳಿಕೆಯು ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾದಾಗ ತನ್ನ ಹೇಳಿಕೆಯಿಂದ ಹಿಂದೆ ಸರಿದ ಅವರು, ‘‘ಪುಲ್ವಾಮ ದಾಳಿಯ ಬಳಿಕ ನಾವು ಭಾರತದ ಮೇಲೆ ದಾಳಿ ನಡೆಸಿದೆವು’’ ಎನ್ನುವ ಮೂಲಕ ತನ್ನ ಹೇಳಿಕೆಯನ್ನು ಬದಲಿಸಿದರು.

 ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡ ಸಭೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಾಜ್ವಾರ ಕಾಲುಗಳು ನಡುಗುತ್ತಿದ್ದವು ಎಂಬುದಾಗಿ ಪ್ರತಿಪಕ್ಷ ಪಿಎಮ್‌ಎಲ್-ಎನ್ ಸಂಸದರೊಬ್ಬರು ನ್ಯಾಶನಲ್ ಅಸೆಂಬ್ಲಿಯಲ್ಲಿ ಹೇಳಿದ ಬಳಿಕ ಸಚಿವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News