ಸ್ಥಳೀಯ ಆಡಳಿತ-ಶಿಕ್ಷಣ ಹಕ್ಕು ಕಾಯ್ದೆ ಸಮಾಲೋಚನ ಕಾರ್ಯಕ್ರಮ

Update: 2020-10-29 16:35 GMT

ಉಡುಪಿ, ಅ.29: ಪಡಿ ಸಂಸ್ಥೆ ಮಂಗಳೂರು, ಉಡುಪಿ ಜಿಪಂ,ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಎಸ್‌ಡಿಎಂಸಿ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಸರಕಾರಿ ಪ್ರೌಢ ಶಾಲೆ ವಳಕಾಡು ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಹಕ್ಕು ಕಾಯಿದೆ ಕುರಿತು ಜಿಲ್ಲಾ ಮಟ್ಟದ ಸಮಾಲೋಚನ ಕಾರ್ಯಕ್ರಮ ವಳಕಾಡಿನ ಸರಕಾರಿ ಪ್ರೌಢ ಶಾಲೆಯ ನಲಂದಾ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ಮಾತುಗಳ ನ್ನಾಡಿ, ಪಂಚಾಯತ್‌ನ ಮೂಲಕ ಮಾಹಿತಿ ಸಂಗ್ರಹಿಸುವುದರಿಂದ ಗ್ರಾಪಂ ನಲ್ಲಿರುವ ಕುಂದು ಕೊರತೆಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದರು.

ಶಿಕ್ಷಣ ಹಕ್ಕು ಕಾಯ್ದೆ ಕುರಿತಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಅಷ್ಟೆ ಅಲ್ಲದೇ ಸ್ಥಳೀಯ ಸರಕಾರಕ್ಕೂ ಜವಾಬ್ದಾರಿ ಇದೆ. ಒಂದು ಮಗು ಶಾಲೆ ಯಿಂದ ಹೊರಗುಳಿದರೆ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳೂ ಜವಾಬ್ದಾರರಾಗುತ್ತಾರೆ ಎಂದರು.

‘ಶಿಕ್ಷಣ ಹಕ್ಕು ಕಾಯಿದೆ’ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್‌ಟಿಇ ಕಾಯ್ದೆಯ ಮುಖ್ಯ ಉದ್ದೇಶ 6-14 ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಬೇಕು ಎಂಬುದಾಗಿದೆ. ಶಿಕ್ಷಣವು ಮೂಲಭೂತ ಹಕ್ಕು ಕೂಡ ಹೌದು. ಮತ್ತು ರಾಷ್ಟ್ರದ ಪ್ರತಿ ಮಗು ಕಡ್ಡಾಯ ಪ್ರವೇಶ, ಹಾಜರಾತಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವುದನ್ನು ಖಚಿತ ಪಡಿಸುತ್ತದೆ ಎಂದು ರೆನ್ನಿ ಡಿಸೋಜ ತಿಳಿಸಿದರು.

ಶಿಕ್ಷಣ ಹಕ್ಕು ಕಾಯಿದೆ ಕುರಿತು ಉಡುಪಿ ಜಿಲ್ಲೆಯ 6 ಗ್ರಾಪಂ, ಒಂದು ನಗರಸಭೆ ಮತ್ತು 2 ಪುರಸಭೆಯಲ್ಲಿ ಅಧ್ಯಯನವನ್ನು ಮಾಡಲಾಗಿದೆ. ಇದು ಮಕ್ಕಳ ಶಿಕ್ಷಣ ಮತ್ತು ಶಾಲಾಬಿವೃಧ್ಧಿಗೆ ಪೂರಕವಾದುದು. ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರಾಧಿಕಾರ ಕೂಡ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೇ ನಗರ ಮತ್ತು ಪುರಸಭೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಮತ್ತು ಶಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಶಿಕ್ಷಣಕ್ಕೆ ನಗರ ಮತ್ತು ಪುರಸಭೆಯಲ್ಲಿ ಬಜೆಟ್‌ನ್ನು ಇಡಬೇಕು ಎಂಬ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೂಡ ಉಲ್ಲೇಖ ಮಾಡಲಾಗಿದೆ. ಪಂಚಾಯತ್ ವ್ಯಾಪ್ತಿಯ ಮಕ್ಕಳ ಅಂಕಿ ಅಂಶಗಳನ್ನು ಅಂದರೆ 0-1, 1-6, 6-12, 12-16, 16-18 ಪಂಚಾಯತ್‌ನಲ್ಲಿ ನಿರ್ವಹಿಸಬೇಕು ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಅಶೋಕ ಕಾಮತ್ ಹೇಳಿದರು.

 ಪಡಿ ಸಂಸ್ಥೆಯು ಶಿಕ್ಷಣ ಹಕ್ಕು ಕಾಯಿದೆ ಕುರಿತು ಉಡುಪಿ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆ , ಸಮೀಕ್ಷೆಯ ಅಂಕಿಅಂಕಗಳು ಹಾಗೂ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖ ಸುಧಾರಣಾ ಅಂಶಗಳ ಕುರಿತು ಪಡಿಯ ಜಿಲ್ಲಾ ಸಂಯೋಜಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News