ಫ್ರಾನ್ಸ್, ಜರ್ಮನಿಯಲ್ಲಿ ಕೊರೋನ ವೈರಸ್ ಲಾಕ್‌ಡೌನ್ ಮರು ಜಾರಿ

Update: 2020-10-29 16:46 GMT

ಪ್ಯಾರಿಸ್, ಅ. 29: ಯುರೋಪ್‌ನ ಎರಡು ಶ್ರೀಮಂತ ದೇಶಗಳಾದ ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರೀಯ ಲಾಕ್‌ಡೌನ್ ಮಾದರಿಯ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿವೆ. ಯುರೋಪ್ ಖಂಡದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಮತ್ತು ಅದರಿಂದಾಗಿ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವ ಬೆನ್ನಿಗೇ ನಿರ್ಬಂಧಗಳು ಜಾರಿಗೊಂಡಿವೆ.

ಫ್ರಾನ್ಸ್‌ನಲ್ಲಿ ಶುಕ್ರವಾರದಿಂದ ಜನರು ಅಗತ್ಯ ಕೆಲಸಗಳು ಅಥವಾ ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಮನೆಗಳಿಂದ ಹೊರಗೆ ಹೋಗಬಹುದಾಗಿದೆ.

ಟಿವಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮರು ಲಾಕ್‌ಡೌನನ್ನು ಘೋಷಿಸಿದ್ದಾರೆ. ದೇಶವು ಎರಡನೇ ಅಲೆಯ ಕೊರೋನ ಸೋಂಕಿನ ಗಂಭೀರ ಅಪಾಯವನ್ನು ಎದುರಿಸುತ್ತಿದೆ ಹಾಗೂ ಇದು ಮೊದಲನೆಯ ಅಲೆಗಿಂತ ಹೆಚ್ಚು ಕಠಿಣ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದರು.

ಅದೇ ವೇಳೆ, ಜರ್ಮನಿಯಲ್ಲಿ ಕಡಿಮೆ ತೀವ್ರತೆಯ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅಲ್ಲಿನ ನಿರ್ಬಂಧಗಳು ಸೋಮವಾರದಿಂದ ಜಾರಿಗೆ ಬರಲಿವೆ. ನಿರ್ಬಂಧದ ಅವಧಿಯಲ್ಲಿ ರೆಸ್ಟೋರೆಂಟ್‌ಗಳು, ಬಾರ್‌ಗಳು, ಜಿಮ್‌ಗಳು ಮತ್ತು ಸಿನೇಮಾ ಮಂದಿರಗಳು ಮುಚ್ಚಿರುತ್ತವೆ ಎಂದು ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News