ವಾಮಾಚಾರ ಆರೋಪ: ಒಂದೇ ಕುಟುಂಬದ ಮೂವರ ಶಿರಚ್ಛೇದ

Update: 2020-10-29 18:06 GMT

ರಾಂಚಿ, ಅ.29: ಜಾರ್ಖಂಡ್‌ನ ಬುಡಕಟ್ಟು ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಖುಂತಿ ಜಿಲ್ಲೆಯ ಕಾಡೊಂದರಲ್ಲಿ ಒಂದೇ ಕುಟುಂಬದ ಮೂವರು ವ್ಯಕ್ತಿಗಳ ಮೃತದೇಹ ಶಿರಚ್ಛೇದ ನಡೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾಮಾಚಾರ ಪ್ರಯೋಗಿಸುತ್ತಿದ್ದ ಆರೋಪದಲ್ಲಿ ಮೂರು ವಾರಗಳ ಹಿಂದೆ ಇವರನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಅದೇ ಗ್ರಾಮದ ಸೋಮ ಮುಂಡ, ರಘು ಮುಂಡ ಮತ್ತು ಬಿಶ್ರಾಮ್ ಮುಂಡ ಎಂಬವರನ್ನು ಬಂಧಿಸಲಾಗಿದ್ದು ಉಳಿದ 6 ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ . ಬಂಧಿತರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಖುಂತಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ಹೇಳಿದ್ದಾರೆ. ಹತರಾದ ವ್ಯಕ್ತಿಗಳನ್ನು ಸಾಯಿಕೊ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ ಗ್ರಾಮದ ನಿವಾಸಿಗಳಾದ ಬಿರ್ಸ ಮುಂಡ(48 ವರ್ಷ), ಆತನ ಪತ್ನಿ ಸುಕ್ರು ಪುರ್ತಿ(43 ವರ್ಷ) ಹಾಗೂ ಮಗಳು ಸೋಮ್ವಾರಿ ಪುರ್ತಿ (20 ವರ್ಷ) ಎಂದು ಗುರುತಿಸಲಾಗಿದೆ. ಅಕ್ಟೋಬರ್ 7ರಂದು ಇವರು ನಾಪತ್ತೆಯಾಗಿದ್ದರು. ವಿವಾಹವಾಗಿ ಪತಿಯ ಮನೆಯಲ್ಲಿದ್ದ ಹಿರಿಯ ಪುತ್ರಿ ತೆಲಾನಿ ಅಕ್ಟೋಬರ್ 8ರಂದು ತವರು ಮನೆಗೆ ಬಂದಿದ್ದು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ನೆರೆಹೊರೆಯವರಲ್ಲಿ ವಿಚಾರಿಸಿದ್ದಾಳೆ. ಆದರೆ ಸರಿಯಾದ ಮಾಹಿತಿ ದೊರಕದ ಕಾರಣ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಜಮೀನಿನ ವಿವಾದಕ್ಕೆ ಸಂಬಂಧಿಸಿ ತಂದೆ, ತಾಯಿ ಮತ್ತು ಸಹೋದರಿಯನ್ನು ಅಪಹರಿಸಿರುವ ಸಾಧ್ಯತೆಯಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಆದರೆ ತನಿಖೆಯ ಸಂದರ್ಭ ಈ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಅದೇ ಗ್ರಾಮದ ಮಹಿಳೆಯೊಬ್ಬಳು ಈ ತಿಂಗಳ ಆರಂಭದಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದು ಹುಟ್ಟಿದ ಕೆಲ ದಿನಗಳಲ್ಲೇ ಶಿಶು ಸಾವನ್ನಪ್ಪಿದೆ.

ಬಿರ್ಸ ಮುಂಡ ಕುಟುಂಬದವರು ಮಾಟ-ಮಂತ್ರದ ಸಹಿತ ವಾಮಾಚಾರ ಪ್ರಯೋಗ ಮಾಡಿದ್ದರಿಂದ ಮಗು ಸತ್ತಿದೆ ಎಂದು ಸ್ಥಳೀಯ ನಾಟಿ ವೈದ್ಯನೊಬ್ಬ ಹೇಳಿದ್ದ. ಇದಾದ ಕೆಲ ದಿನಗಳಲ್ಲೇ ಮುಂಡ, ಆತನ ಪತ್ನಿ ಮತ್ತು ಪುತ್ರಿ ನಾಪತ್ತೆಯಾಗಿದ್ದಾಳೆ. ಪೊಲೀಸರು ಶ್ವಾನಪಡೆಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದಾಗ ಬುಧವಾರ ಕಾಡೊಂದರಲ್ಲಿ ರುಂಡ ರಹಿತ ಮೃತದೇಹ ಪತ್ತೆಯಾಗಿದೆ. ಸಮೀಪದ ನಿರ್ಜನ ಪ್ರದೇಶದಲ್ಲಿ ಮೂವರ ರುಂಡವೂ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News