ಮುಂಗೇರ್ ಗುಂಡು ಹಾರಾಟ ಪ್ರಕರಣ: ತನಿಖೆಗೆ ಆದೇಶಿಸಿದ ಚುನಾವಣಾ ಆಯೋಗ

Update: 2020-10-29 18:22 GMT

ಮುಂಗೇರ್ (ಬಿಹಾರ), ಅ. 29: ಸೋಮವಾರ ನಡೆದ ದುರ್ಗಾ ಪೂಜೆ ಕಾರ್ಯಕ್ರಮದ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಓರ್ವ ಸಾವನ್ನಪ್ಪಿದ ಪ್ರಕರಣದ ಕುರಿತು ಮುಂಗೇರ್ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ದಂಡಾಧಿಕಾರಿ ಅವರನ್ನು ಕೂಡಲೇ ವಜಾಗೊಳಿಸುವಂತೆ ಚುನಾವಣಾ ಆಯೋಗ ಗುರುವಾರ ಆದೇಶಿಸಿದೆ.

ಬಿಹಾರ ವಿಧಾನ ಸಭೆ ಚುನಾವಣೆ ನಡೆಯಲಿರುವ ಎರಡು ದಿನ ಮುನ್ನ ಮುಂಗೇರ್ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರದ ತನಿಖೆಗೆ ಕೂಡ ಚುನಾವಣಾ ಆಯೋಗ ಆದೇಶ ನೀಡಿದೆ. ಮುಂಗೇರ್‌ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಗೇರ್‌ನ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ದಂಡಾಧಿಕಾರಿ ಅವರನ್ನು ಕೂಡಲೇ ವಜಾಗೊಳಿಸಲು ಚುನಾವಣಾ ಆಯೋಗ ಆದೇಶಿಸಿದೆ.

ಈ ಸಂಪೂರ್ಣ ಘಟನೆಯನ್ನು ಮಗದದ ವಿಭಾಗೀಯ ಆಯುಕ್ತ ಅಸಂಗ್ಭಾ ಚುಬಾ ಆಒ ತನಿಖೆ ನಡೆಸುವಂತೆ ಹಾಗೂ ಮುಂದಿನ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಬಿಹಾರದ ಚುನಾವಣಾ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ತವ್ಯದಿಂದ ಅಮಾನತುಗೊಂಡ ಅಧಿಕಾರಿಗಳೆಂದರೆ ಮುಂಗೇರ್ ಜಿಲ್ಲಾ ದಂಡಾಧಿಕಾರಿ ರಾಜೇಶ್ ಮೀನಾ ಹಾಗೂ ಪೊಲೀಸ್ ಅಧೀಕ್ಷಕ ಲಿಪಿ ಸಿಂಗ್. ಸೋಮವಾರ ದುರ್ಗಾದೇವಿಯ ವಿಗ್ರಹದ ವಿಸರ್ಜನೆ ಕಾರ್ಯಕ್ರಮದಲ್ಲಿ ಸಂಭವಿಸಿದ ಘರ್ಷಣೆಯ ಸಂದರ್ಭ 18 ವರ್ಷದ ಯುವಕನ ಸಾವಿಗೆ ಕಾರಣವಾದ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಕುರಿತ ಹಿಂಸಾತ್ಮಕ ಪ್ರತಿಭಟನೆಯ ನಡುವೆ ಈ ಆದೇಶ ಹೊರಬಿದ್ದಿದೆ. ದುರ್ಗಾ ಮೂರ್ತಿ ಒಯ್ಯುತ್ತಿರುವ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News