ಪಂಚಕುಲ ಗೋಶಾಲೆಯಲ್ಲಿ ವಿಷ ಆಹಾರ ಸೇವಿಸಿ 70 ಜಾನುವಾರುಗಳು ಸಾವು

Update: 2020-10-29 18:24 GMT

ಪಂಚಕುಲ (ಹರ್ಯಾಣ), ಅ. 29:  ಪಂಚಕುಲದ ಮನಸಾ ದೇವಿ ದೇವಾಲಯದ ಸಮೀಪ ಇರುವ ಹರ್ಯಾಣ ಸರಕಾರದ ಮಾತಾ ಮನಸಾ ದೇವಿ ಗೋಶಾಲೆಯಲ್ಲಿ ಬುಧವಾರ ವಿಷ ಆಹಾರ ಸೇವಿಸಿ 70 ಗೋವುಗಳು ಹಾಗೂ ಗೂಳಿಗಳು ಸಾವನ್ನಪ್ಪಿವೆ ಹಾಗೂ ಇತರ 30 ಜಾನುವಾರುಗಳು ಅಸ್ವಸ್ಥಗೊಂಡಿವೆ.

ಆಹಾರ ವಿಷವಾದುದರಿಂದ ಜಾನುವಾರುಗಳು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ‘‘ನಾವು ಪರಿಶೀಲನೆಗೆ ಮೇವು ಸೇರಿದಂತೆ ಮಾದರಿಗಳನ್ನು ಪಡೆದುಕೊಂಡಿದ್ದೇವೆ. ಅಸ್ವಸ್ಥಗೊಂಡಿದ್ದ ಹಲವು ಜಾನುವಾರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ ಹಾಗೂ ಚೇತರಿಸಿಕೊಳ್ಳುತ್ತಿವೆ. ಇದು ಆಹಾರ ವಿಷವಾಗಿರುವ ಪ್ರಕರಣವಾಗಿರುವ ಸಾಧ್ಯತೆ ಇದೆ. ಜಾನುವಾರುಗಳಿಗೆ ಉಸಿರುಕಟ್ಟುವಿಕೆ ಹಾಗೂ ಹೊಟ್ಟೆ ಊದಿಕೊಳ್ಳುವ ಲಕ್ಷಣ ಕಂಡು ಬಂದಿದೆ’’  ಎಂದು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಅನಿಲ್ ಕುಮಾರ್ ಹೇಳಿದ್ದಾರೆ.

ಕೆಲವು ಗೋವುಗಳು ಚಡಪಡಿಸುವುದು ನಮಗೆ ಮಂಗಳವಾರ ರಾತ್ರಿ 9.15ಕ್ಕೆ ತಿಳಿಯಿತು. ಆದುದರಿಂದ ವೈದ್ಯರ ತಂಡವೊಂದನ್ನು ಇಲ್ಲಿಗೆ ಕರೆಸಲಾಯಿತು ಎಂದು ಟ್ರಸ್ಟ್‌ನ ಮ್ಯಾನೇಜರ್ ತಿಳಿಸಿದ್ದಾರೆ. ಈ ಘಟನೆಯನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರೂಪಿಸಲಾಗಿದೆ.ಅಲ್ಲದೆ, ಮೂರು ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹರ್ಯಾಣ ವಿಧಾನ ಸಭೆ ಸ್ಪೀಕರ್ ಗ್ಯಾನ್ ಚಂದ್ ಗುಪ್ತಾ ಹೇಳಿದ್ದಾರೆ. ‘‘ಗೋವುಗಳು ಚಡಪಡಿಸುತ್ತಿರುವುದು ಹಾಗೂ ಕೆಲವು ಗೋವುಗಳು ಕುಸಿದು ಬಿದ್ದಿರುವುದು ಗೋಶಾಲೆಯ ಮ್ಯಾನೇಜರ್‌ಗೆ ರಾತ್ರಿ 9.15ಕ್ಕೆ ತಿಳಿಯಿತು. ಎರಡು ಶೆಡ್‌ಗಳಲ್ಲಿ ಜಾನುವಾರುಗಳು ಅಸ್ವಸ್ಥವಾಗಿದ್ದವು. ಕೂಡಲೇ ವೈದ್ಯರ ತಂಡಕ್ಕೆ ಕರೆ ನೀಡಲಾಯಿತು. ವೈದ್ಯರ ತಂಡ ರಾತ್ರಿ ಪೂರ್ತಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿತು’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News