ಕಾಂಗ್ರೆಸ್ ದೇಶದ ಕ್ಷಮೆ ಕೋರಬೇಕು: ಪ್ರಕಾಶ್ ಜಾವಡೇಕರ್
ಹೊಸದಿಲ್ಲಿ, ಅ. 30: ಸಿಆರ್‌ಪಿಎಫ್‌ನ 40 ಸಿಬ್ಬಂದಿ ಹುತಾತ್ಮರಾಗಲು ಕಾರಣವಾದ ಪುಲ್ವಾಮಾ ಭಯೋತ್ಪಾದನೆ ದಾಳಿಯ ಹಿಂದೆ ತನ್ನ ದೇಶದ ಕೈವಾಡ ಇದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ ಒಂದು ದಿನದ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪುಲ್ವಾಮ ಭಯೋತ್ಪಾದನೆ ದಾಳಿ ಬಗ್ಗೆ ನೀಡಿದ ಹೇಳಿಕೆ ಹಾಗೂ ‘ಪಿತೂರಿ ಸಿದ್ಧಾಂತ’ ಮುಂದಿಟ್ಟಿರುವುದಕ್ಕಾಗಿ ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು ಎಂದು ಶುಕ್ರವಾರ ಆಗ್ರಹಿಸಿದ್ದಾರೆ.
ಪುಲ್ವಾಮ ದಾಳಿಯ ಹಿಂದೆ ತನ್ನ ಕೈವಾಡ ಇದೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಆದುದರಿಂದ ಪಿತೂರಿ ಸಿದ್ಧಾಂತ ಮುಂದಿಟ್ಟ ಕಾಂಗ್ರೆಸ್ ಹಾಗೂ ಇತರರು ದೇಶದ ಕ್ಷಮೆ ಯಾಚಿಸಬೇಕು ಎಂದು ಅವರು ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಪುಲ್ವಾಮ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕವಾದ ಫೆಬ್ರವರಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಗುರಿಯಾಗಿರಿಸಿ, ಭದ್ರತಾ ಲೋಪದ ಹೊಣೆಯನ್ನು ಬಿಜೆಪಿ ಹೊರಬೇಕು ಎಂದಿದ್ದರು. ಅಲ್ಲದೆ, ಈ ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು ಎಂದು ಪ್ರಶ್ನಿಸಿದ್ದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವುದು ರಾಹುಲ್ ಗಾಂಧಿ ಮಾತ್ರ ಅಲ್ಲ. ಬದಲಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಕರ್ನಾಟಕ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಕೂಡ ವಾಗ್ದಾಳಿ ನಡೆಸಿದ್ದರು. ‘‘ನರೇಂದ್ರ ಮೋದಿ ಅವರು ಪಾಕಿಸ್ತಾನದ ಜನರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿದಂತೆ ತೋರುತ್ತದೆ’’ ಎಂದು ಹೇಳಿದ್ದರು.
ಪಾಕಿಸ್ತಾನದ ಸಚಿವ ಫವಾದ್ ಚೌಧುರಿ ಗುರುವಾರ, ‘‘ನಾವು ಅವರ ನೆಲದಲ್ಲೇ ಅವರನ್ನು ಹೊಡೆದಿದ್ದೇವೆ’’ ಎಂದು ಹೇಳಿದ್ದರು. ಅನಂತರ ಅವರು ತನ್ನ ಹೇಳಿಕೆ ತಿರುಚಲಾಗಿದೆ ಎಂದಿದ್ದರು. ‘‘ಪಾಕಿಸ್ತಾನ ಯಾವುದೇ ಭಯೋತ್ಪಾದನೆ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’’ ಎಂದಿದ್ದರು.