ಜೆಎನ್‌ಯು ಹಿಂಸಾಚಾರ ಪ್ರಕರಣ: ಹೊಸ ಎಫ್‌ಐಆರ್ ಸಲ್ಲಿಕೆಗೆ ಆದೇಶಿಸಲು ದಿಲ್ಲಿ ಕೋರ್ಟ್ ನಕಾರ

Update: 2020-10-30 16:52 GMT

  ಹೊಸದಿಲ್ಲಿ,ಅ.30: ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು) ಆವರಣದಲ್ಲಿ ಜನವರಿ 5ರಂದು ಮುಸುಕುಧಾರಿ ವ್ಯಕ್ತಿಗಳು ನಡೆಸಿದ್ದ ದಾಳಿ ಘಟನೆಯ ಬಗ್ಗೆ ಹೊಸ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬೇಕೆಂದು ಕೋರಿ, ಪ್ರೊಫೆಸರ್ ಸುಚರಿತಾ ಸೇನ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ಗುರುವಾರ ತಳ್ಳಿಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ ಹೊಸದಾಗಿ ಎಫ್‌ಐಆರ್ ಸಲ್ಲಿಸಬೇಕಾದ ಅಗತ್ಯವಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ. ಜವಾಹರಲಾಲ್ ನೆಹರೂ ವಿವಿ ದಾಳಿ ಘಟನೆಯಲ್ಲಿ ಸುಚರಿತಾ ಸೇನ್ ಅವರು ಮುಸುಕುಧಾರಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದರು.

 ಜೆಎನ್‌ಯು ವಿವಿಯ ಆವರಣದಲ್ಲಿರುವ ಪೆರಿಯಾರ್ ವಿದ್ಯಾರ್ಥಿ ವಸತಿಗೃಹದಲ್ಲಿ ಜಮಾಯಿಸಿದ್ದ ಗುಂಪು ನಡೆಸಿದ್ದ ಹಿಂಸಾಕೃತ್ಯಗಳ ಕುರಿತ ಸ್ಥಿತಿಗತಿ ವರದಿಯನ್ನು ಪೊಲೀಸರು ಸಲ್ಲಿಸಿದ ಬಳಿಕ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.

ಜನವರಿ 5ರಂದು ಜವಾಹರಲಾಲ್ ನೆಹರೂ ವಿವಿ ಆವರಣದಲ್ಲಿ ನಡೆದಿದ್ದ ಹಿಂಸಾತ್ಮಕ ಕೃತ್ಯದಿಂದಾಗಿ ದೂರುದಾರೆ ಸೇರಿದಂತೆ ಕೆಲವು ವ್ಯಕ್ತಿಗಳು ಗಾಯಗೊಂಡಿರುವ ಹಾಗೂ ಸೊತ್ತುಗಳಿಗೆ ಹಾನಿಯಾಗಿರುವ ಎಫ್‌ಐಆರ್ ದಾಖಲಿಸಲಾಗಿದೆ. ಆದುದರಿಂದ ದೂರುದಾರೆ ಸುಚರಿತಾ ಸೇನ್ ಅವರು ನೀಡಿದ ದೂರಿನ ಮೇರೆಗೆ ಪ್ರತ್ಯೇಕವಾದ ಎಫ್‌ಐಆರ್ ದಾಖಲಿಸಬೇಕೆಂದು ಆದೇಶ ನೀಡುವ ಆಗತ್ಯವಿಲ್ಲವೆಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಸಿಂಗ್ ರಾಜಾವತ್ , ಅರ್ಜಿಯನ್ನು ತಿರಸ್ಕರಿಸಿ, ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಈ ದಾಳಿ ಘಟನೆಯ ಕುರಿತು ದಾಖಲಿಸಲಾದ ಎಫ್‌ಐಆರ್‌ನ ಆಧಾರದಲ್ಲಿ ನಡೆಯುತ್ತಿರುವ ತನಿಖೆಯ ಸ್ಥಿತಿಗತಿ ವರದಿಯನ್ನು ಡಿಸೆಂಬರ್ 19ರೊಳಗೆ ಸಲ್ಲಿಸುವಂತೆ ನ್ಯಾಯಾಧೀಶರು ಕ್ರೈಂಬ್ರಾಂಚ್‌ನ ಉಪಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.

ಜನವರಿ 5ರಂದು ಲಾಠಿಗಳು ಹಾಗೂ ರಾಡ್ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದ ವ್ಯಕ್ತಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಾಳಿ ನಡೆಸಿದರು ಹಾಗೂ ಕ್ಯಾಂಪಸ್‌ನ ಆಸ್ತಿಪಾಸ್ತಿಗಳಿಗೆ ಹಾನಿಯೆಸಗಿದ್ದರು.

 ವಿವಿ ಕ್ಯಾಂಪಸ್‌ನಲ್ಲಿ ಸುಮಾರು ಎರಡು ತಾಸುಗಳ ಕಾಲ ನಡೆದ ಹಿಂಸಾಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 28 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News