ಉಡುಪಿ: ನಿವೃತ್ತಿಯ ದಿನದಂದು ಬಡ ವಿದ್ಯಾರ್ಥಿನಿಗೆ ಮನೆ ಕೊಡುಗೆ ನೀಡಿದ ಮುಖ್ಯೋಪಾಧ್ಯಾಯ

Update: 2020-10-31 08:37 GMT

ಉಡುಪಿ, ಅ. 31: ಬಡ ವಿದ್ಯಾರ್ಥಿನಿಗೆ ತನ್ನ ವೈಯಕ್ತಿಕ ಹಣದಿಂದ ಮನೆ ನಿರ್ಮಿಸಿ ಕೊಡುವ ಮೂಲಕ ನಿಟ್ಟೂರು ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಮಾನವೀಯ ಕಾರ್ಯವನ್ನು ಮಾಡಿದ್ದಾರೆ.

ತನ್ನ ನಿವೃತ್ತಿ ದಿನವಾಗಿರುವ ಇಂದು ಅವರು ಈ ಹೊಸ ಮನೆಯನ್ನು ವಿದ್ಯಾರ್ಥಿನಿ ಕುಟುಂಬಕ್ಕೆ ಹಸ್ತಾಂತರಿಸಿದರು. ಉಡುಪಿ ನಗರ ಸಭೆ ವ್ಯಾಪ್ತಿಯ ಕಕ್ಕುಂಜೆ ವಾರ್ಡ್ ನಿವಾಸಿ, ನಿಟ್ಟೂರು ಪ್ರೌಢ ಶಾಲಾ ವಿದ್ಯಾರ್ಥಿನಿಯಾಗಿರುವ ನಯನ ಅವರದ್ದು ತೀರಾ ಬಡಕುಟುಂಬ ಆಗಿದ್ದು, ಇದನ್ನು ಮನಗಂಡ ನಿಟ್ಟೂರು ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ತನ್ನ ವೈಯಕ್ತಿಕ ಹಣದಿಂದ ವಿದ್ಯಾರ್ಥಿನಿಯ ಕುಟುಂಬದವರಿಗೆ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಈ ಶಾಲೆಯಲ್ಲಿ 32 ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಐದು ವರ್ಷ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತಿ ಹೊಂದಿರುವ ಮುರಲಿ ಕಡೆಕಾರ್ ಅವರಿಗೆ ಶಾಲಾ ರಜತ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಇದಕ್ಕೂ ಮುನ್ನ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿದ್ಯಾರ್ಥಿನಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್. ಸ್ಥಳೀಯ ನಗರಸಭಾ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ನಿಟ್ಟೂರು ಎಜುಕೇಶನಲ್ ಸೊಸೈಟಿಯ ಪದಾಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News