ಲಾಕ್ ಡೌನ್ ವೇಳೆ 1400 ಕಿಮೀ ಪ್ರಯಾಣಿಸಿದ ಈ ಬಿಹಾರಿ ಕಾರ್ಮಿಕರ ಮತ ಯಾರಿಗೆ ಗೊತ್ತೇ?

Update: 2020-10-31 12:34 GMT
Photo: theprint.in

ಬೇಗುಸರೈ: ಬಿಹಾರದ ಬೇಗುಸರೈ ಜಿಲ್ಲೆಯ ಹುಸೈನ ಎಂಬ ಗ್ರಾಮದವರಾಗಿರುವ ವಲಸಿಗ ಕಾರ್ಮಿಕರಾದ ಕೌಶಲ್ ಕುಮಾರ್ ಹಾಗೂ ರಂಜಿತ್ ಮೇ ತಿಂಗಳಲ್ಲಿ ಲಾಕ್ ಡೌನ್ ವೇಳೆ  ಹರ್ಯಾಣಾದ ಗುರ್ಗಾಂವ್‍ನಿಂದ 1,400 ಕಿಮೀ  ದೂರವನ್ನು ಬಿಸಿಲ ಧಗೆ ಹಾಗೂ ಹಸಿವನ್ನು ತಾಳಿಕೊಂಡು ರಿಕ್ಷಾ ಗಾಡಿಯಲ್ಲಿ ತಮ್ಮ ಗ್ರಾಮಕ್ಕೆ ತಲುಪಿದ 14 ಮಂದಿಯ ಪೈಕಿ ಇಬ್ಬರಾಗಿದ್ದರು. ಆದರೆ ಕಳೆದ ಐದು ತಿಂಗಳಲ್ಲಿ ಯವುದೇ ಕೆಲಸ ಹಾಗೂ ಸರಕಾರದ ಸಹಾಯ ದೊರೆಯದೆ ಅವರೀಗ ಮತ್ತೆ ದಿಲ್ಲಿಗೆ ಮರಳಿದ್ದಾರೆ.

ಗ್ರಾಮದಲ್ಲಿರುವ ಅವರ ಕುಟುಂಬಗಳ ಸದಸ್ಯರು ತಮ್ಮ ಸಮಸ್ಯೆಗಳ ನಡುವೆ ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಮತ ನೀಡುವುದಾಗಿ ಹೇಳುತ್ತಾರೆ.

"ಮೋದಿ ನಮಗೆ ಗ್ಯಾಸ್, ಶೌಚಾಲಯ ಮತ್ತಿತರ ಸವಲತ್ತುಗಳನ್ನು ಒದಗಿಸಿದ್ದಾರೆ ಆದರೆ ಇಲ್ಲಿನ ಅಧಿಕಾರಿಗಳ ಎಲ್ಲಾ ಹಣ ಬಳಸಿದ್ದಾರೆ,'' ಎಂದು ಕೌಶಲ್ ಪತ್ನಿ ಪೂನಂ ದೇವಿ ಹೇಳುತ್ತಾರೆ. "ನಮ್ಮಂತಹ ಬಡವರಿಗೆ ಸವಲತ್ತು ತಲುಪಿಲ್ಲ. ಆದರೆ ಪ್ರಧಾನಿ ಒಳ್ಳೆಯ ಕೆಲಸ ಮಾಡಿದ್ದಾರೆ ನಾವು ಅವರಿಗೆ ಮತ ನೀಡುತ್ತೇವೆ,'' ಎಂದು ಅವರು ಹೇಳುತ್ತಾರೆ.

ಆದರೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಒಪ್ಪಂದದಂತೆ ಹುಸೈನ ಗ್ರಾಮವು ಸಾಹೇಬಪುರ್ ಕಮಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು ಇಲ್ಲಿ ಜೆಡಿಯು ಪಕ್ಷದ ಶಶಿಕಾಂತ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ.

ಈ ಗ್ರಾಮದ ವಲಸಿಗ ಕಾರ್ಮಿಕರ ಕುಟುಂಬಗಳು ಸಿಎಂ ನಿತೀಶ್ ಕುಮಾರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಆದರೆ ತಮ್ಮ ಕಷ್ಟಗಳಿಗೆ ಪ್ರಧಾನಿ ಕಾರಣರಲ್ಲ ಎಂಬುದು ಅವರ ಭಾವನೆ.

ಸರಕಾರದ ಸಹಾಯವಿಲ್ಲ: ರಾಜ್ಯ ಸರಕಾರದಿಂದ ಕಳೆದೈದು ತಿಂಗಳಲ್ಲಿ ತಮಗೆ ಯಾವುದೇ ಸಹಾಯ ದೊರೆತಿಲ್ಲ ಎಂದು ಕಾರ್ಮಿಕರ ಕುಟುಂಬಗಳು ಹೇಳುತ್ತಿವೆ. ವಲಸಿಗ ಕಾರ್ಮಿಕರು ಮನೆಗೆ ವಾಪಸಾದಾಗ ಅವರಿಗೆ ಪ್ರಯಾಣ ಟಿಕೆಟ್ ವೆಚ್ಚವಾಗಿ ರೂ. 1,000 ನೀಡಿರುವುದಾಗಿ ನಿತೀಶ್ ಕುಮಾರ್ ಜೂನ್ ತಿಂಗಳಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಜೂನ್ 20ರಂದು ಬಿಹಾರದ ಖಗಾರಿಯಾ ಜಿಲ್ಲೆಯಿಂದ ರೂ. 50,000 ಕೋಟಿ ವೆಚ್ಚದ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್‍ಗೆ ಚಾಲನೆ ನೀಡಿದ್ದರು. ಈ ಯೋಜನೆಯನ್ವಯ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದ ವಲಸಿಗ ಕಾರ್ಮಿಕರಿಗೆ 125 ದಿನಗಳ ಉದ್ಯೋಗ ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಅದರಿಂದ ತಮಗೇನೂ ಲಾಭವಾಗಿಲ್ಲ ಎಂದು ಕಾರ್ಮಿಕರು ಹೇಳುತ್ತಾರೆ. ಇದೇ ಕಾರಣದಿಂದ ಹಲವರು ತಾವು ಎಲ್ಲಿಂದ ವಾಪಸ್ ಬಂದಿದ್ದರೋ ಅಲ್ಲಿಗೇ ಮರಳಿದ್ದಾರೆ. ಹಲವು ಕುಟುಂಬಗಳು ಈಗ ಸಾಲದ ಕೂಪದಲ್ಲಿ ನರಳುತ್ತಿವೆ.

ಬಿಹಾರದ ಸುಮಾರು 30 ಲಕ್ಷ ವಲಸಿಗ ಕಾರ್ಮಿಕರು ಲಾಕ್ ಡೌನ್ ಸಂದರ್ಭ ಬೆಂಗಳೂರು, ದಿಲ್ಲಿ ಮುಂತಾದೆಡೆಗಳಿಂದ ವಾಪಸಾಗಿದ್ದರು,. ಆದರೆ ಈಗ ಹೆಚ್ಚಿನ ಗ್ರಾಮಗಳಲ್ಲಿ ಕೆಲವೇ ಕೆಲವು ಮಂದಿಯಿದ್ದಾರೆ. ಅವರು ಕೂಡ ನವೆಂಬರ್ 20ರಂದು ನಡೆಯುವ ಛತ್ ಪೂಜಾ ನಂತರ ವಾಪಸ್ ಹೋಗಲು ನಿರ್ಧರಿಸಿದ್ದಾರೆ.

Writer - ಶಂಕರ್ ಅರ್ನಿಮೇಶ್ -theprint.in

contributor

Editor - ಶಂಕರ್ ಅರ್ನಿಮೇಶ್ -theprint.in

contributor

Similar News