ಬೌಲರ್ ಗಳ ಮಾರಕ ದಾಳಿ: ಬಲಿಷ್ಠ ಮುಂಬೈಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್

Update: 2020-10-31 13:10 GMT

ದುಬೈ: ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದ್ದು, ಸತತ ನಾಲ್ಕನೇ ಸೋಲು ಕಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 110 ರನ್ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ 25, ರಿಷಬ್ ಪಂತ್ 20 ರನ್ ಗಳಿಸಿದರು. ಮುಂಬೈ ಪರ ಬುಮ್ರಾ ಹಾಗೂ ಬೌಲ್ಟ್ ತಲಾ 3 ವಿಕೆಟ್ ಕಬಳಿಸಿದರು.

ಆರಂಭದಲ್ಲೇ ಮುಂಬೈ ಬೌಲರ್ ಗಳ ದಾಳಿಗೆ ಕುಸಿತ ಕಂಡ ಡೆಲ್ಲಿ ಕ್ಯಾಪಿಟಲ್ಸ್ ನಂತರ ಚೇತರಿಸಲಿಲ್ಲ. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಕ್ಯಾಪಿಟಲ್ಸ್ ಮುಂಬೈಗೆ ಕೇವಲ 111 ರನ್ ಗುರಿ ನೀಡಿತು. ಸುಲಭ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೇವಲ 14.2 ಓವರ್ ಗಳಲ್ಲಿ ಗೆಲುವಿನ ದಡ ತಲುಪಿತು.

ಮೊದಲ ವಿಕೆಟ್ ಗೆ ಇಶಾನ್ ಕಿಶಾನ್ ಹಾಗೂ ಡಿಕಾಕ್ 68 ರನ್ ಗಳ ಜೊತೆಯಾಟ ನಡೆಸಿದರು. ಡಿಕಾಕ್ 26 ರನ್ ಗಳಿಸಿ ಔಟಾದರೆ, ಇಶಾನ್ ಕಿಶಾನ್ 47 ಎಸೆತಗಳಲ್ಲಿ 72 ರನ್ ಸಿಡಿಸಿದರು. ಸೂರ್ಯಕುಮಾರ್ ಯಾದವ್ 12 ರನ್ ಗಳಿಸಿದರು.

ಪ್ಲೇ ಆಫ್‌ನಲ್ಲಿ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡು ನಿರಾಳವಾಗಿರುವ ಮುಂಬೈ ಇಂಡಿಯನ್ಸ್ ತಂಡ ಈ ಗೆಲುವಿನೊಂದಿಗೆ ಅಗ್ರಸ್ಥಾನ ಬಲಪಡಿಸಿಕೊಂಡಿತು. ಗೆಲುವಿನ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಡುವ ಹಂಬಲದಲ್ಲಿದ್ದ ಶ್ರೇಯಸ್‌ ಅಯ್ಯರ್ ಬಳಗ ಸತತ 4 ಪಂದ್ಯಗಳಲ್ಲಿ ಸೋಲು ಕಂಡಿತು. ಹಾಲಿ ಚಾಂಪಿಯನ್ ಮುಂಬೈ 13 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 13 ಪಂದ್ಯಗಳಲ್ಲಿ 6ರಲ್ಲಿ ಸೋತು 7 ರಲ್ಲಿ ಜಯಗಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News