ಉಡುಪಿ : 49 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢ

Update: 2020-10-31 13:37 GMT

ಉಡುಪಿ, ಅ.31: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಶನಿವಾರ 49 ಮಂದಿ ಯಲ್ಲಿ ಹೊಸದಾಗಿ ಪತ್ತೆಯಾಗಿದೆ. ಶುಕ್ರವಾರ ಒಟ್ಟು 114 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 49 ಮಂದಿಯಲ್ಲಿ ಮಕ್ಕಳು ಸೇರಿದಂತೆ 33 ಮಂದಿ ಪುರುಷರು ಹಾಗೂ 16 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 19 ಪುರುಷರು ಹಾಗೂ 12 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 24, ಕುಂದಾಪುರ ತಾಲೂಕಿನ 13 ಹಾಗೂ ಕಾರ್ಕಳ ತಾಲೂಕಿನ 10 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಚಿಕಿತ್ಸೆಗೆಂದು ಹೊರಜಿಲ್ಲೆಯಿಂದ ಬಂದ ಇಬ್ಬರು ಸಹ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ಹೇಳಿದರು.

ದಿನದಲ್ಲಿ ಪಾಸಿಟಿವ್ ಬಂದ 49 ಮಂದಿಯಲ್ಲಿ ಮೂವರು ಮಾತ್ರ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ, ಉಳಿದ 46 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

114 ಮಂದಿ ಗುಣಮುಖ: ಶುಕ್ರವಾರ ಒಟ್ಟು 114 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಸೋಂಕಿ ನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 20,952 ಆಗಿದೆ. ಜಿಲ್ಲೆಯಲ್ಲಿ ಸದ್ಯ 753 ಮಂದಿ ಸಕ್ರಿಯ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದವರು ವಿವರಿಸಿದರು.

2090 ನೆಗೆಟಿವ್:  ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 2143 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ 2090 ಮಂದಿ ನೆಗೆಟಿವ್ ಬಂದಿದ್ದು, 53 (ಐಸಿಎಂಆರ್ ವರದಿ)ಮಂದಿ ಪಾಸಿಟಿವ್ ಬಂದಿದ್ದಾರೆ. ಹೀಗಾಗಿ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 21,886 ಆಗಿದೆ.

ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಒಟ್ಟು 1,83,499 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,61,613 ಮಂದಿ ನೆಗೆಟಿವ್ ಹಾಗೂ 21,886 ಮಂದಿ ಪಾಸಿಟಿವ್ ಬಂದಿದ್ದಾರೆ. ಈಗಾಗಲೇ 20,952 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು 182 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕೋವಿಡ್ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ಹೀಗಾಗಿ ಈವರೆಗೆ ಕೊರೋನಕ್ಕೆ ಬಲಿಯಾದವರ ಸಂಖ್ಯೆ 182 ಆಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News