×
Ad

ನೊಬೆಲ್ ನೀಡಿಕೆಯಲ್ಲಿ ವ್ಯಕ್ತಿನಿಷ್ಠ ಆಯ್ಕೆ?

Update: 2020-11-01 00:06 IST

2020ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಲೂಯಿಸ್ ಗ್ಲಕ್‌ರವರಿಗೆ ಅಭಿನಂದನೆಗಳು. ಗ್ಲಕ್ ಓರ್ವ ಅಮೆರಿಕನ್ ಕವಿ. ಒಟ್ಟು 6 ನೊಬೆಲ್ ಪ್ರಶಸ್ತಿಗಳಲ್ಲಿ ಸಾಹಿತ್ಯ ಮತ್ತು ಶಾಂತಿ-ಈ ಎರಡೂ ವರ್ಗದ ಪ್ರಶಸ್ತಿಗಳು ಸದಾ ವಿವಾದಾಸ್ಪದವಾಗಿವೆ. ಸಾಹಿತ್ಯಕ್ಕೆ ನೀಡಲಾಗುವ ಪ್ರಶಸ್ತಿ ನೊಬೆಲ್ ಪ್ರಶಸ್ತಿಗಳಲ್ಲಿ ಅತ್ಯಂತ ವ್ಯಕ್ತಿನಿಷ್ಠವಾಗಿದೆ. ಅದು 1913ರಲ್ಲಿ ರವೀಂದ್ರನಾಥ ಠಾಗೂರರ ಅನುಭಾವಿ ಕಾವ್ಯವಿರಬಹುದು ಅಥವಾ 2016ರಲ್ಲಿ ‘ಉಪಯೋಗಕಾರಿ’ ಹಾಡುಗಳು ಮತ್ತು ಭಾವಗೀತೆಗಳನ್ನು ಬರೆದ ಡೈಲನ್‌ನ ಕಾವ್ಯವಿರಬಹುದು ನೊಬೆಲ್ ಸಮಿತಿಯ ಆಯ್ಕೆಗಳು ಅಹಿತಕರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನೊಬೆಲ್ ಪ್ರಶಸ್ತಿಯ ಆರಂಭದಿಂದಲೂ ಒಂದು ಸ್ಪಷ್ಟ ಪಕ್ಷಪಾತತನ ಕಂಡುಬಂದಿದೆ: 1901ರಲ್ಲಿ ರಶ್ಯದ ಮಹಾನ್ ಲೇಖಕ ಲಿಯೋ ಟಾಲ್‌ಸ್ಟಾಯ್‌ರನ್ನು ಕಡೆಗಣಿಸಿ ಫ್ರೆಂಚ್ ಕಾದಂಬರಿಕಾರ ಸಲಿ ಪ್ರುಧೋಮ್‌ಗೆ ನೀಡಲಾಗಿತ್ತು. ನೊಬೆಲ್ ಸಮಿತಿ ಸದಸ್ಯರ ವ್ಯಕ್ತಿನಿಷ್ಠತೆ ಪ್ರಶಸ್ತಿಯ ಆಯ್ಕೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ನೊಬೆಲ್ ಸಾಹಿತ್ಯ ಪ್ರಶಸ್ತಿಯಲ್ಲಿ ಬಾಬ್ ಡೈಲನ್‌ಗೆ ಪ್ರಶಸ್ತಿ ನೀಡಿರುವಾಗ ಅಲ್ಲಾಮಾ ಇಕ್ಬಾಲ್ ಅಥವಾ ಸಾಹಿರ್ ಲುಧಿಯಾನ್ವಿಗೆ ಯಾಕೆ ನೀಡಬಾರದಿತ್ತು? ಇಕ್ಬಾಲ್‌ರವರು ಟಾಗೂರರ ಸಮಕಾಲೀನ ಮತ್ತು ಅವರ ಕಾವ್ಯದರ್ಶನ ಟಾಗೂರರ ಕಾವ್ಯದರ್ಶನಕ್ಕಿಂತ ಬಹಳ ದೊಡ್ಡದು. ಒಪ್ಪಿಕೊಳ್ಳೋಣ, ಇಕ್ಬಾಲ್ ತನ್ನ ಬದುಕಿನ ಕೊನೆಯ ಹಂತದಲ್ಲಿ ಧಾರ್ಮಿಕರಾದರು. ಆದರೆ ಮುಸ್ಲಿಮರನ್ನಷ್ಟೇ ಅಲ್ಲ ಸಮಗ್ರ ಮನುಕುಲವನ್ನೇ ಒಳಗೊಳ್ಳುವ ಎಲ್ಲಾ ಜೀವಿಗಳಿಗೂ ಅವರು ತೋರುವ ಅನುಕಂಪಗಳನ್ನು ಕೀಳಂದಾಜು ಮಾಡುವಂತಿಲ್ಲ. ಅವರ ರಮ್ಝ್ -ಎ- ಬೇಖುದಿ, ಪಯಾಮ್-ಎ-ಮಶ್ರಿಕ್, ಜಾವೇದ್ ನಾಮ ಇತ್ಯಾದಿ ಕೃತಿಗಳಲ್ಲಿ ಮನುಕುಲಕ್ಕೆ ಸಾರ್ವತ್ರಿಕವಾದ ಒಂದು ಸಂದೇಶವಿದೆ. ಆದರೆ ದುಃಖದ ಸಂಗತಿಯೆಂದರೆ ಇಸ್ಲಾಮೋಫೋಬಿಕ್ ಯುರೋಪ್ ಅಥವಾ ಜನಾಂಗೀಯ ಪ್ರಜ್ಞೆ ಕೇಂದ್ರಿತವಾದ ನೊಬೆಲ್ ಸಮಿತಿ ಮುಸ್ಲಿಮ್ ಕವಿಗಳನ್ನು ಹಾಗೂ ಲೇಖಕರನ್ನು ಗುರುತಿಸಿ, ಪರಿ ಗಣಿಸಿರುವುದು ತುಂಬಾ ಅಪರೂಪ. ಈಜಿಪ್ಟ್‌ನ ನಜೀಬ್ ಮೆಹ್‌ಫೂಝ್ (1988ರಲ್ಲಿ ನೊಬೆಲ್ ಪ್ರಶಸ್ತಿ) ಅಥವಾ ಟರ್ಕಿಯ ನೊಬೆಲ್ ಪ್ರಶಸ್ತಿ ವಿಜೇತ ಒರ್ಹಾನ್ ಪಾಮುಕ್ (2006) ಕೇವಲ ಅಪವಾದಗಳಷ್ಟೆ.

‘‘ಎಲ್ಲಾ ಪೂಜಾ ಮಂದಿರಗಳನ್ನು ಹಿಂದಕ್ಕೆ ಬಿಟ್ಟು, ನಾವೆಲ್ಲ ಒಂದಾಗೋಣ, ನಾವು ಮಾನವರಾಗೋಣ’’ ಎನ್ನುವ ವಿಶ್ವದರ್ಶನ ಸಾಹಿರ್ ಲುಧಿಯಾನ್ವಿಯವರದ್ದು. ಸಾಹಿರ್ ಅವರ ಸಮಗ್ರ ಕಾವ್ಯವನ್ನು ವಾಸ್ತವದಲ್ಲಿ ಬೇರೂರಿರುವ ಮಾನವತಾ ವಾದವನ್ನು ಪ್ರತಿಪಾದಿಸುವ ಮನುಕುಲದ ಒಳಿತನ್ನು ಬಯಸುವ ಕಾವ್ಯವೆಂದು ಪರಿಗಣಿಸಬಹುದು.

 ‘‘ಹಸಿವು ಮತ್ತು ಬಾಯಾರಿಕೆಯಿಂದ ಪೀಡಿತವಾಗಿರುವ ಜಗತ್ತಿನಲ್ಲಿ ಪ್ರೀತಿಯೊಂದೇ ಸತ್ಯವಲ್ಲ, ಅದಲ್ಲದೆ ಬೇರೆಯದು ಕೂಡ ಇದೆ’’-ಹೀಗೆ ಸಾಹಿರ್ ಸಾರ್ವಕಾಲಿಕ ವಿಶ್ವಾತ್ಮಕ ಕಾಳಜಿಗಳಿಗೆ ತನ್ನ ಕಾವ್ಯದಲ್ಲಿ ಅಭಿವ್ಯಕ್ತಿ ನೀಡಿದ್ದಾರೆ. ಫ್ರೆಂಚ್ ಅಸ್ತಿತ್ವವಾದಿ ಲೇಖಕ ಆಲ್ಬರ್ಟ್ ಕ್ಯಾಮುವಿನ ಹರಿತವಾದ ಗದ್ಯದಂತೆ ಸಾಹಿರ್ ದುಡಿಯುವ ವರ್ಗದ ಜನರಿಗಾಗಿ ಮತ್ತು ಅವರ ಹಲವು ಸಮಸ್ಯೆಗಳ ಕುರಿತಾಗಿ ಚಿಂತನೆಗೆ ಹಚ್ಚುವ ಕಾವ್ಯವನ್ನು ಬರೆದಿದ್ದಾರೆ. ಕ್ಯಾಮು ಕಾರ್ಮಿಕರ ವರ್ಗಕ್ಕಾಗಿ ಬರೆದ ಲೇಖಕ. ಆತನಿಗೆ 1957ರ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರಕಿತ್ತು ಮತ್ತು ಇಂದಿನವರೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಅತ್ಯಂತ ಹೆಚ್ಚು ಅರ್ಹವಾದ ಲೇಖಕ ಆತ. ಕಾರ್ಮಿಕ ವರ್ಗಕ್ಕೆ ಕ್ಯಾಮುವಿನ ಹಾಗೆಯೇ ಧ್ವನಿ ನೀಡಿದವರು ಸಾಹಿರ್. ನೆನಪಿದೆಯೇ ಅವರ ಪ್ರಸಿದ್ಧ ಸಾಲು ‘‘ಓಹ್ ಸುಬಹ್ ಕಭೀ ತೋ ಆಯೇಗಿ...?’’ ಬೇರೆಯವರ ಉದ್ಯಾನಗಳಲ್ಲಿರುವ ಸುಳ್ಳು ಗುಲಾಬಿಗಳ ಬಗ್ಗೆ ನಾವು ಉದ್ಗಾರ ಮಾಡುತ್ತಾ ತಮಟೆ ಬಡಿಯುತ್ತೇವೆ. ಆದರೆ ನಮ್ಮದೇ ಹಿತ್ತಲಲ್ಲಿರುವ ಸುಂದರವಾದ ಹಸಿರು ಹುಲ್ಲಿನ ಹಾಸನ್ನು ನಾವು ಕಡೆಗಣಿಸುತ್ತೇವೆ. ನಾವು ಟಿ.ಎಸ್.ಎಲಿಯಟ್ (1948), ಸೈಂಟ್ ಜಾನ್ ಪೆರ್ಸ್(1960) ಮತ್ತು ಸಾಲ್ವತೋರ್ ಕ್ವಾಸಿಮೊಡೊ(1959)ರವರ ಕಾವ್ಯದಲ್ಲಿರುವ ಮಾನವೀಯತೆಯ ಅಂಶಗಳ ಕೊರತೆ ಯನ್ನು ಓದಿ ಆನಂದಿಸುತ್ತೇವೆ. ಆದರೆ ಸಾಹಿರ್ ಅಥವಾ ಇಕ್ಬಾಲ್‌ರವರ ಕಾವ್ಯದಲ್ಲಿರುವ ಮಾನವೀಯತೆಯನ್ನು ಮರೆಯುತ್ತೇವೆ. ಪಾಶ್ಚಿಮಾತ್ಯ ಜಗತ್ತು ಕರಿಯರ ಹಾಗೂ ಕಂದು ಬಣ್ಣದ ಜನರ ಕಾವ್ಯಕ್ಕೆ ಹಾಗೂ ಅವರ ಸೃಜನಶೀಲತೆಗೆ ಎಂದೂ ಗಮನ ನೀಡಲಿಲ್ಲ. ಆದ್ದರಿಂದಲೇ ಇಕ್ಬಾಲ್, ಸಾಹಿರ್ ಅಥವಾ ಕನ್ನಡ ಸಾಹಿತ್ಯದ ಕುವೆಂಪುರವರಿಗೆ ಯಾವತ್ತೂ ನೊಬೆಲ್ ಪ್ರಶಸ್ತಿ ಸಿಗಲಿಲ್ಲ. ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಅವರ ಕಾವ್ಯ ಹಾಗೂ ಪ್ರಖರ ಚಿಂತನೆಗಳನ್ನು ನೊಬೆಲ್ ಸಮಿತಿ ಯಾವತ್ತೂ ಗುರುತಿಸಲಿಲ್ಲ.

ಕೃಪೆ: (deccanherald)

Writer - ಸುಮಿತ್ ಪೌಲ್

contributor

Editor - ಸುಮಿತ್ ಪೌಲ್

contributor

Similar News