ಕಳೆದ ವರ್ಷ ಜಾಹೀರಾತುಗಳಿಗಾಗಿ ಮೋದಿ ಸರಕಾರ ವ್ಯಯಿಸಿದ ತೆರಿಗೆದಾರರ ಹಣ ಎಷ್ಟು ಗೊತ್ತೇ ?

Update: 2020-11-01 15:47 GMT

ಹೊಸದಿಲ್ಲಿ, ನ.1: ಕಳೆದ ಹಣಕಾಸು ವರ್ಷದಲ್ಲಿ ವೃತ್ತಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ಹೋರ್ಡಿಂಗ್‌ಗಳು ಇತ್ಯಾದಿಗಳಲ್ಲಿ ಜಾಹೀರಾತುಗಳ ಮೂಲಕ ತನ್ನ ಪ್ರಚಾರಕ್ಕಾಗಿ ನರೇಂದ್ರ ಮೋದಿ ಸರಕಾರವು 713.20 ಕೋ.ರೂ. ತೆರಿಗೆದಾರರ ಹಣವನ್ನು ವೆಚ್ಚ ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಜತಿನ್ ದೇಸಾಯಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಬ್ಯೂರೊ ಆಫ್ ಔಟ್‌ರೀಚ್ ಆ್ಯಂಡ್ ಕಮ್ಯುನಿಕೇಷನ್, ಕೇಂದ್ರ ಸರಕಾರವು 2019-20ರಲ್ಲಿ ಜಾಹೀರಾತುಗಳಿಗಾಗಿ ಪ್ರತಿದಿನ ಸರಾಸರಿ 1.95 ಕೋ.ರೂ.ಗಳನ್ನು ವ್ಯಯಿಸಿದೆ ಎಂದು ತಿಳಿಸಿದೆ.

ಮುದ್ರಿತ ಜಾಹೀರಾತುಗಳಿಗೆ 295.05 ಕೋ.ರೂ., ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳಿಗೆ 317.05 ಕೋ.ರೂ. ಮತ್ತು ಹೊರಾಂಗಣ ಜಾಹೀರಾತುಗಳಿಗಾಗಿ 101.10 ಕೋ.ರೂ.ಗಳನ್ನು ಪಾವತಿಸಲಾಗಿದೆ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ. ಆದರೆ ವಿದೇಶಿ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಸರಕಾರವು ವೆಚ್ಚ ಮಾಡಿರುವ ಹಣದ ಬಗ್ಗೆ ಯಾವುದೇ ಮಾಹಿತಿಯನ್ನು ಅದು ಒದಗಿಸಿಲ್ಲ.

2019, ಜೂನ್‌ನಲ್ಲಿ ಮುಂಬೈನ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರ ಅರ್ಜಿಗೆ ಉತ್ತರಿಸಿದ್ದ ಸಚಿವಾಲಯವು ಮುದ್ರಣ, ವಿದ್ಯುನ್ಮಾನ ಮತ್ತು ಹೊರಾಂಗಣ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ ತಾನು 3,767.2651 ಕೋ.ರೂ.ತೆರಿಗೆದಾರರ ಹಣವನ್ನು ವ್ಯಯಿಸಿದ್ದಾಗಿ ತಿಳಿಸಿತ್ತು.

ಒಂದು ವರ್ಷ ಮೊದಲು, 2018 ಮೇ ತಿಂಗಳಿನಲ್ಲಿ ಸಚಿವಾಲಯವು ಗಲಗಲಿಯವರಿಗೆ ನೀಡಿದ್ದ ಇನ್ನೊಂದು ಆರ್‌ಟಿಐ ಉತ್ತರದಲ್ಲಿ ಮೋದಿ ಸರಕಾರವು 2014, ಜೂನ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 4343.26 ಕೋ.ರೂ.ಗಳನ್ನು ಮಾಧ್ಯಮಗಳಲ್ಲಿ ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ ವ್ಯಯಿಸಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News