ದಲಿತ ಭದ್ರತಾ ಸಿಬ್ಬಂದಿಯ ಮೇಲೆ ದೇವಸ್ಥಾನದ ಅರ್ಚಕನಿಂದ ಹಲ್ಲೆ

Update: 2020-11-01 17:43 GMT

ಚೆನ್ನೈ, ನ.1: ತಿರುಚೆಂಡೂರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ದಲಿತ ಭದ್ರತಾ ಸಿಬಂದಿಯ ಮೇಲೆ ದೇವಸ್ಥಾನದ ಅರ್ಚಕ ಹಲ್ಲೆ ನಡೆಸಿರುವ ಪ್ರಕರಣದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಅರ್ಚಕನ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ವಿಸಿಕೆ ಪಕ್ಷದ ಮುಖಂಡರು ಹೇಳಿದ್ದಾರೆ.

   ದೇವಸ್ಥಾನದ ಕೀಯನ್ನು ಅರ್ಚಕ ಜಯಮಾಲಿನಿ ಕುಮಾರ್ ಎಂಬಾತ ಕೇಳಿದಾಗ, ಸಂಬಂಧಿಸಿದ ಅಧಿಕಾರಿಗಳು ಸೂಚಿಸದೆ ತಾನು ಹಾಗೆ ಮಾಡುವಂತಿಲ್ಲ ಎಂದು ತಾತ್ಕಾಲಿಕ ನೆಲೆಯಲ್ಲಿ ನೇಮಕವಾಗಿದ್ದ ಭದ್ರತಾ ಸಿಬಂದಿ ತಿಳಿಸಿದ್ದಾನೆ. ಇದರಿಂದ ಸಿಟ್ಟುಗೊಂಡ ಅರ್ಚಕ ಭದ್ರತಾ ಸಿಬಂದಿಯನ್ನು ದೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಮತ್ತೆ ಹಲ್ಲೆಗೆ ಮುಂದಾದಾಗ ಅಲ್ಲಿದ್ದ ಇತರರು ತಡೆದಿದ್ದು ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ ಎಂದು ವಿಡುಥಲೈ ಚಿರುಥೈಗಲ್ ಕಚ್ಚಿ(ವಿಸಿಕೆ) ಪಕ್ಷದ ತೂತುಕುಡಿ ಜಿಲ್ಲಾ ಕಾರ್ಯದರ್ಶಿ ಎಂ.ತಮಿಳಪ್ಪನ್ ಆರೋಪಿಸಿದ್ದು, ಅರ್ಚಕನ ವಿರುದ್ಧ ಎಫ್‌ಐಆರ್ ದಾಖಲಿಸಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ತಾತ್ಕಾಲಿಕ ನೆಲೆಯಲ್ಲಿ ನೌಕರಿಗೆ ಸೇರಿದ್ದರಿಂದ ತನ್ನ ಕೆಲಸ ಹೋಗುತ್ತದೆ ಎಂಬ ಭೀತಿಯಿಂದ ಸಂತ್ರಸ್ತ ಭದ್ರತಾ ಸಿಬ್ಬಂದಿ ದೂರು ನೀಡಲು ಹಿಂಜರಿಯುತ್ತಿದ್ದಾನೆ. ಆದ್ದರಿಂದ ದೇವಸ್ಥಾನದ ದಲಿತ ಸಿಬ್ಬಂದಿ ಪರವಾಗಿ ತಾನು ತಿರುಚೆಂಡೂರ್ ದೇವಸ್ಥಾನದ ಪೊಲೀಸರಿಗೆ ದೂರು ನೀಡಿದ್ದೇನೆ ಎಂದವರು ವಿವರಿಸಿದ್ದಾರೆ.

ಅರ್ಚಕ ಜಯಮಾಲಿನಿ ಕುಮಾರ್ ಪ್ರಭಾವೀ ವ್ಯಕ್ತಿಗಳಿಗೆ ಸುಲಭವಾಗಿ ದೇವರನ್ನು ದರ್ಶನ ಮಾಡುವ ವ್ಯವಸ್ಥೆ ಮಾಡುತ್ತಿದ್ದಾನೆ. ಈ ಕಾರಣದಿಂದಲೇ ದೇವಸ್ಥಾನದ ಕೀಯನ್ನು ತನ್ನ ವಶಕ್ಕೆ ನೀಡುವಂತೆ ಕೇಳಿದ್ದಾನೆ. ಆದರೆ ಆತನ ಕೃತ್ಯದ ಬಗ್ಗೆ ಅರಿವಿದ್ದ ಭದ್ರತಾ ಸಿಬ್ಬಂದಿ ಅದನ್ನು ನಿರಾಕರಿಸಿದಾಗ ಅರ್ಚಕ ಹಲ್ಲೆ ನಡೆಸಿದ್ದಾನೆ . ಜಾತಿ ತಾರತಮ್ಯ ಮಾಡುವ ಇಂತಹ ವ್ಯಕ್ತಿಗಳನ್ನು ದೇವಸ್ಥಾನದ ಅರ್ಚಕ ಹುದ್ದೆಯಿಂದ ವಜಾಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News