ನೂತನ ಭೂ ಕಾನೂನಿಗೆ ವಿರೋಧ: ಕಾಶ್ಮೀರ ಸಂಪೂರ್ಣ ಸ್ತಬ್ಧ

Update: 2020-11-01 17:19 GMT

ಶ್ರೀನಗರ, ನ.1: ಜಮ್ಮು-ಕಾಶ್ಮೀರದಲ್ಲಿ ಜಾರಿಗೊಳಿಸಿರುವ ನೂತನ ಭೂ ಕಾನೂನನ್ನು ವಿರೋಧಿಸಿ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಪರೆನ್ಸ್ ಶನಿವಾರ ಕರೆನೀಡಿದ್ದ ಬಂದ್ ಕರೆಯಿಂದ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ಹೇಳಿವೆ.

ಯಾವುದೇ ಭಾರತೀಯ ಪ್ರಜೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಮೀನು ಖರೀದಿಸಲು ಅವಕಾಶ ನೀಡುವ ಕಾನೂನನ್ನು ಸರಕಾರ ಜಾರಿಗೊಳಿಸಿದ್ದು ಇದನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಶ್ರೀನಗರದಲ್ಲಿ ಎಲ್ಲಾ ಅಂಗಡಿ, ವ್ಯಾಪಾರ ಸಂಸ್ಥೆಗಳು ಬಾಗಿಲು ಮುಚ್ಚಿದ್ದು ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಿತ್ತು. ಸರಕಾರಿ ಸಾರಿಗೆ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಕೆಲವೇ ಖಾಸಗಿ ವಾಹನಗಳು ಓಡಾಟ ನಡೆಸಿದವು. ಉತ್ತರ ಕಾಶ್ಮೀರದ ಸೊಪೋರ್, ಬಾರಮುಲ್ಲ, ಕುಪ್ವಾರ, ಹಂದ್ವಾರ ಮತ್ತು ಬಂಡಿಪೋರ್ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ದೈನಂದಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ದಕ್ಷಿಣ ಕಾಶ್ಮೀರದ ಶೋಪಿಯಾನ್, ಕುಲ್ಗಾಂವ್, ಅನಂತ್‌ನಾಗ್ ಸಹಿತ ಪ್ರಮುಖ ನಗರಗಳಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದೆ. ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಆದೇಶ ಜಾರಿಯಾದ ಬಳಿಕ (2019ರ ಆಗಸ್ಟ್ 5) ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಮೊದಲ ಬಂದ್ ಪ್ರತಿಭಟನೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News