ನ್ಯೂಝಿಲ್ಯಾಂಡ್ ನಲ್ಲಿ ಭಾರತ ಮೂಲದ ಮೊದಲ ಸಚಿವೆಯಾಗಿ ಪ್ರಿಯಾಂಕಾ ರಾಧಾಕೃಷ್ಣನ್
Update: 2020-11-02 15:48 IST
ಮೆಲ್ಬೋರ್ನ್: ಪ್ರಧಾನಮಂತ್ರಿ ಜಸಿಂಡಾ ಅರ್ಡೆರ್ನ್ ಅವರು ಐವರು ಹೊಸ ಮಂತ್ರಿಗಳನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದು, ಪ್ರಿಯಾಂಕಾ ರಾಧಾಕೃಷ್ಣನ್ ನ್ಯೂಝಿಲ್ಯಾಂಡ್ ನ ಮೊದಲ ಭಾರತೀಯ ಮೂಲದ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದಲ್ಲಿ ಜನಿಸಿರುವ 41ರ ವಯಸ್ಸಿನ ಪ್ರಿಯಾಂಕಾ ಹೆಚ್ಚಿನ ಶಿಕ್ಷಣಕ್ಕೆ ನ್ಯೂಝಿಲ್ಯಾಂಡ್ ಗೆ ತೆರಳುವ ಮೊದಲು ಸಿಂಗಾಪುರದಲ್ಲಿ ಶಾಲಾ ಶಿಕ್ಷಣ ಪಡೆದಿದ್ದರು.
ಕೌಟುಂಬಿಕ ಹಿಂಸಾಚಾರದಿಂದ ಬದುಕುಳಿದ ಮಹಿಳೆಯರು ಹಾಗೂ ಶೋಷಣೆಗೆ ಒಳಗಾದ ವಲಸೆ ಕಾರ್ಮಿಕರು ಸಹಿತ ಧ್ವನಿಯಿಲ್ಲದವರ ಧ್ವನಿಯಾಗಿ ಇವರು ಸಾಕಷ್ಟು ಕೆಲಸ ಮಾಡಿದ್ದಾರೆ.
2017ರ ಸೆಪ್ಟಂಬರ್ ನಲ್ಲಿ ಲೇಬರ್ ಪಾರ್ಟಿಯಿಂದ ಸಂಸತ್ ಸದಸ್ಯೆಯಾಗಿ ಮೊದಲ ಬಾರಿ ಆಯ್ಕೆಯಾಗಿದ್ದರು. 2019ರಲ್ಲಿ ಜನಾಂಗೀಯ ಸಮುದಾಯ ಸಚಿವಾಲಯದ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.