×
Ad

ದೇವರೇ ನಮ್ಮನ್ನು ಕಾಪಾಡಬೇಕು ಎಂದ ಸಂತ್ರಸ್ತ ಕುಟುಂಬ

Update: 2020-11-02 18:12 IST
ಸಾಂದರ್ಭಿಕ ಚಿತ್ರ

ಲಕ್ನೋ,ನ,2: ಸುಮಾರು ಎರಡೂವರೆ ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಲಖಿಮ್‌ಪುರ ಖೇರಿ ಜಿಲ್ಲೆಯ ಇಸ್ರಾನಗರದಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಅಪ್ರಾಪ್ತ ವಯಸ್ಕ ಬಾಲಕಿಯ ಕುಟುಂಬವಿನ್ನೂ ದುಃಖದ ಸುಳಿಯಿಂದ ಹೊರಬಂದಿಲ್ಲ. ಬಂಧಿತ ಆರೋಪಿಗಳ ಪೈಕಿ ಓರ್ವನ ಸೋದರ ಸಂತ್ರಸ್ತ ಕುಟುಂಬಕ್ಕೆ ಬೆದರಿಕೆಯೊಡ್ಡುತ್ತಿದ್ದು, ಪುತ್ರಿಯ ಸಾವಿನ ದುಃಖದಿಂದ ಹೊರಬರಲಾಗದ ಈ ಕುಟುಂಬಕ್ಕೆ ಈಗ ಇನ್ನೊಂದು ಆಘಾತವುಂಟಾಗಿದೆ. ಕೊಲೆಯಾಗಿರುವ ಬಾಲಕಿಯ ಅಕ್ಕ ಹೆಣ್ಣುಶಿಶುವಿಗೆ ಜನ್ಮ ನೀಡಿದ್ದಳಾದರೂ ಕೆಲವೇ ಗಂಟೆಗಳಲ್ಲಿ ಅದು ಕೊನೆಯುಸಿರೆಳೆದಿದೆ. ‘ಆ ಮಗುವಾದರೂ ಬದುಕಿದ್ದಿದ್ದರೆ ನಮ್ಮ ಮಗಳೇ ಅವಳ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾಳೆ ಎಂದು ಸಮಾಧಾನವನ್ನಾದರೂ ಪಟ್ಟುಕೊಳ್ಳುತ್ತಿದ್ದೆವು.ದೇವರೇ ನಮ್ಮನ್ನು ಕಾಪಾಡಬೇಕು ’ಎಂದು ಈ ಕುಟುಂಬ ದುಃಖಿಸುತ್ತಿದೆ.

ಇಸ್ರಾನಗರದ ಶಿವ-ಶಾಂತಿ ದಂಪತಿಗೆ ಮೂವರು ಮಕ್ಕಳು. ಇಬ್ಬರು ಪುತ್ರರ ಬೆನ್ನಿಗೆ ಹುಟ್ಟಿದ್ದ ಪುತ್ರಿ ತಾರಾ(13) ಆ.14ರಂದು ಮಧ್ಯಾಹ್ನ ಬಹಿರ್ದೆಸೆಗೆಂದು ಮನೆಯಿಂದ 200 ಮೀ.ದೂರದದಲ್ಲಿರುವ ಕಬ್ಬಿನ ಗದ್ದೆಗೆ ತೆರಳಿದ್ದಳು. ಎಷ್ಟು ಹೊತ್ತಾದರೂ ಆಕೆ ವಾಪಸ್ ಬರದಿದ್ದಾಗ ಮನೆಮಂದಿ ಹುಡುಕಾಟದಲ್ಲಿ ತೊಡಗಿದ್ದರು. ಸಂಜೆಯ ವೇಳೆ ಕಬ್ಬಿನ ಗದ್ದೆಯಲ್ಲಿ ಬೆಳೆಯ ನಡುವೆ ತಾರಾಳ ಶವ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗಿ,ಆಕೆಯದೇ ದುಪಟ್ಟಾವನ್ನು ಕೊರಳಿಗೆ ಬಿಗಿದು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಯಾದವ್ ಮತ್ತು ಸಂಜಯ್ ಗೌತಮ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ತಾರಾಳ ಶವ ಪತ್ತೆಯಾಗಿದ್ದ ಕಬ್ಬಿನ ಗದ್ದೆಯ ಮಾಲಿಕನಾಗಿದ್ದಾನೆ. ತಾರಾಳ ಸಾವಿಗೆ ಕೆಲವೇ ದಿನಗಳ ಮೊದಲು ಆತ ತನ್ನ ಗದ್ದೆಯಲ್ಲಿ ಮಲ ವಿಸರ್ಜಿಸುವುದರ ವಿರುದ್ಧ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದ.

ಗೌತಮ್ ಜಾತಿಯ ತಾರಾಳ ಹೆತ್ತವರು ದಲಿತ ಸಮುದಾಯಕ್ಕೆ ಸೇರಿದ್ದಾರೆ. ಸಂಜಯ ಕೂಡ ಇದೇ ಜಾತಿಗೆ ಸೇರಿದ್ದು,ಸಂತೋಷ ಉತ್ತರ ಪ್ರದೇಶದಲ್ಲಿ ಒಬಿಸಿ ವರ್ಗಗಳಡಿಯ ಯಾದವ ಜಾತಿಗೆ ಸೇರಿದ್ದಾನೆ.

ತಾರಾಳ ಮನೆಯಲ್ಲಿ ಶೌಚಾಲಯವಿರಲಿಲ್ಲ. ಹೀಗಾಗಿ ತಾರಾ,ಆಕೆಯ ಹೆತ್ತವರಾದ ಶಿವ ಮತ್ತು ಶಾಂತಿ ಹಾಗೂ ಇಬ್ಬರು ಸೋದರರು ಬಹಿರ್ದೆಸೆಗಾಗಿ ಸಮೀಪದ ಸಂತೋಷ್ ಗೆ ಸೇರಿದ ಕಬ್ಬಿನ ಗದ್ದೆಯನ್ನೇ ಆಶ್ರಯಿಸಿದ್ದರು.

ಆ ವೇಳೆಗೆ ನಮ್ಮ ಶೌಚಾಲಯ ನಿರ್ಮಾಣವಾಗಿದ್ದಿದ್ದರೆ ನಮ್ಮ ಮಗಳು ಬದುಕುಳಿಯುತ್ತಿದ್ದಳೇನೋ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ವರದಿಗಾರರ ತಂಡದೆದುರು ಶಿವ ದುಃಖಿಸಿದ. ಶಿವ ಸಣ್ಣರೈತನಾಗಿದ್ದು,ಜೊತೆಗೆ ಕೂಲಿಕೆಲಸವನ್ನೂ ಮಾಡುತ್ತಿದ್ದಾನೆ.

ಗ್ರಾಮದ ಸರಪಂಚ ಕಳೆದ ವರ್ಷ ಕೇಂದ್ರ ಸರಕಾರದ ಸ್ವಚ್ಛ ಭಾರತ ಆಭಿಯಾನದಡಿ ತಾರಾಳ ಕುಟುಂಬಕ್ಕೆ ಶೌಚಾಲಯವನ್ನು ಮಂಜೂರು ಮಾಡಿದ್ದು,ಮೊದಲ ಕಂತಾಗಿ 12,000 ರೂ.ಗಳನ್ನು ನೀಡಲಾಗಿತ್ತು. ಆದರೆ ಎರಡನೇ ಕಂತು ವಿಳಂಬವಾಗಿರುವುದರಿಂದ ಶೌಚಾಲಯ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ತಾರಾಳ ಕೊಲೆಯ ಬಳಿಕ ಕುಟುಂಬವು ಸಾಲ ಮಾಡಿ ಶೌಚಾಲಯ ನಿರ್ಮಾಣವನ್ನು ಪೂರ್ಣಗೊಳಿಸಿದೆ.

ಶಿವ ಸಲ್ಲಿಸಿದ್ದ ದೂರಿನ ಮೇರೆಗೆ ಪೊಲೀಸರು ಕೊಲೆ ನಡೆದ ದಿನವೇ ರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಗಳು ಪರಾರಿಯಾಗಲು ರಸ್ತೆ ಬದಿ ವಾಹನಕ್ಕಾಗಿ ಕಾಯುತ್ತಿದ್ದಾಗ ತಮ್ಮ ಬಲೆಗೆ ಬಿದ್ದಿದ್ದರೆಂದು ಪೊಲೀಸರು ತಿಳಿಸಿದರೆ,ತಮ್ಮ ಮಕ್ಕಳನ್ನು ಮನೆಯಿಂದ ಬಂಧಿಸಲಾಗಿದೆ ಎಂದು ಆರೋಪಿಗಳ ಕುಟುಂಬಗಳು ಹೇಳಿವೆ.

 ಆ.15ರಂದು ಲಖಿಮ್‌ಪುರ ಖೇರಿ ಜಿಲ್ಲಾಸ್ಪತ್ರೆಯಲ್ಲಿ ತಾರಾಳ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು,ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಉಸಿರುಗಟ್ಟಿಸಿ ಆಕೆಯನ್ನು ಕೊಲ್ಲಲಾಗಿರುವುದನ್ನು ಮರಣೋತ್ತರ ಪರೀಕ್ಷಾ ವರದಿಯು ದೃಢಪಡಿಸಿದೆ.

ಆ.29ರಂದು ಪೊಲೀಸರು ಪ್ರಕರಣದಲ್ಲಿ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ತಾವು ತಾರಾಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ,ಬಳಿಕ ಆಕೆಯನ್ನು ಕೊಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಗ್ರಾಮದ ಮತದಾರರ ಪಟ್ಟಿಯಲ್ಲಿ 100 ಯಾದವರಿದ್ದರೆ,700 ಜನರು ಗೌತಮ ಜಾತಿಗೆ ಸೇರಿದವರಾಗಿದ್ದರೆ. 110 ಜನರು ಪಂಡಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗೌತಮ ಕೆಳಜಾತಿಯಾಗಿದ್ದರೂ,ಅವರ ಸಂಖ್ಯೆಯೇ ಹೆಚ್ಚಿದೆ.

ತಮ್ಮ ಮಕ್ಕಳು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಆರೋಪಿಗಳ ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ ತಮ್ಮ ಮಕ್ಕಳು ತಪ್ಪೇ ಮಾಡಿಲ್ಲ,ಅವರು ಅಂತಹವರೂ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ತನ್ಮಧ್ಯೆ ಲಖಿಮ್‌ಪುರ ಖೇರಿ ಜಿಲ್ಲಾಧಿಕಾರಿ ಶೈಲೇಂದ್ರಕುಮಾರ ಸಿಂಗ್ ಅವರು ಸಂತೋಷ ಯಾದವ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರುವಂತೆ ಅ.20ರಂದು ಆದೇಶಿಸಿದ್ದಾರೆ.

ಉ.ಪ್ರದೇಶ ಸರಕಾರವು ಇತ್ತೀಚಿಗೆ 8.25 ಲ.ರೂ.ಪರಿಹಾರವನ್ನು ತಾರಾಳ ಕುಟುಂಬಕ್ಕೆ ಪಾವತಿಸಿದೆ.

(ಹೆಸರುಗಳನ್ನು ಬದಲಿಸಲಾಗಿದೆ)

 ಕೃಪೆ: newslaundry.com          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News