ಭಾರತದ ನಿರುದ್ಯೋಗ ದರ ಶೇ.6.98ಕ್ಕೇರಿಕೆ: ಸಿಎಂಐಇ
ಹೊಸದಿಲ್ಲಿ,ನ.2: ಕಳೆದ ಅಕ್ಟೋಬರ್ ತಿಂಗಳಿಗೆ ಭಾರತದ ನಿರುದ್ಯೋಗ ದರದಲ್ಲಿ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ವರದಿಯು ತಿಳಿಸಿದೆ. ಸೆಪ್ಟಂಬರ್‌ನಲ್ಲಿ ಶೇ.6.67ರಷ್ಟಿದ್ದ ದೇಶದ ನಿರುದ್ಯೋಗ ದರವು ಕಳೆದ ತಿಂಗಳು ಶೇ.6.98ರಷ್ಟಾಗಿದೆ.
ಕೃಷಿ ಕ್ಷೇತ್ರವು ಉತ್ತಮ ಸಾಧನೆಯನ್ನು ಪ್ರದರ್ಶಿಸಿದೆಯಾದರೂ ಅಕ್ಟೋಬರ್ ತಿಂಗಳಿನಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ನಿರುದ್ಯೋಗ ದರ ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಇದು ಶೇ.6.90ರಷ್ಟಿದ್ದು, ಸೆಪ್ಟಂಬರ್‌ನ ನಿರುದ್ಯೋಗ ದರಕ್ಕೆ ಹೋಲಿಸಿದರೆ ಶೇ.1.04ರಷ್ಟು ಹೆಚ್ಚಳವಾಗಿದೆ. ಆದರೆ ಅಕ್ಟೋಬರ್‌ನಲ್ಲಿ ನಗರ ಪ್ರದೇಶದಲ್ಲಿಯ ನಿರುದ್ಯೋಗ ದರವು ಸ್ವಲ್ಪ ಮಟ್ಟಿಗೆ ಇಳಿದಿದೆ. ಸೆಪ್ಟಂಬರ್‌ನಲ್ಲಿ ಶೇ.8.45ರಷ್ಟಿದ್ದ ಅದು ಅಕ್ಟೋಬರ್‌ನಲ್ಲಿ ಶೇ.7.15ರಷ್ಟಾಗಿದೆ.
ನಿರುದ್ಯೋಗ ದರದಲ್ಲಿ ಏರಿಕೆಯಾಗಿದ್ದರೂ ಕಳೆದ ಫೆಬ್ರವರಿಯಿಂದೀಚಿಗೆ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹವು ಅಕ್ಟೋಬರ್‌ನಲ್ಲಿ ಒಂದು ಲಕ್ಷ ಕೋ.ರೂ.ಗಳನ್ನು ದಾಟಿದೆ. ವಿತ್ತ ಸಚಿವಾಲಯವು ರವಿವಾರ ಬಿಡುಗಡೆಗೊಳಿಸಿದ್ದ ಹೇಳಿಕೆಯಂತೆ 1.05 ಲ.ಕೋ.ರೂ.ಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗಿದ್ದು,ಅಕ್ಟೋಬರ್,2019ರಲ್ಲಿ ಸಂಗ್ರಹವಾಗಿದ್ದ ಜಿಎಸ್‌ಟಿಗೆ ಹೋಲಿಸಿದರೆ ಶೇ.10.2ರಷ್ಟು ಏರಿಕೆಯಾಗಿದೆ.