ಗಡಿ ವಿವಾದದ ಬಗ್ಗೆ ಕರ್ನಾಟಕದೊಂದಿಗೆ ಮಾತುಕತೆ ನಡೆಸಿ: ಮಹಾರಾಷ್ಟ್ರ ರಾಜ್ಯಪಾಲರಲ್ಲಿ ಶಿವಸೇನೆ ಮನವಿ

Update: 2020-11-02 15:33 GMT

ಮುಂಬೈ, ನ. 2: ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಮಾತನಾಡುವ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕರ್ನಾಟಕದ ರಾಜ್ಯಪಾಲರಲ್ಲಿ ಕಟುವಾಗಿ ಮಾತನಾಡುವಂತೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಲ್ಲಿ ಶಿವಸೇನೆ ಸೋಮವಾರ ಆಗ್ರಹಿಸಿದೆ.

ಸೂರ್ಯ ಹಾಗೂ ಚಂದ್ರ ಇರುವ ವರೆಗೂ ಬೆಳಗಾವಿ ಕರ್ನಾಟಕದ ಭಾಗವಾಗಿಯೇ ಇರಲಿದೆ ಎಂದು ಹೇಳಿಕೆ ನೀಡಿದ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಆಕಾಶದಲ್ಲಿ ಸೂರ್ಯ ಹಾಗೂ ಚಂದ್ರ ಇದ್ದಾರೆಯೇ ಎಂದು ನೋಡಿ ಸುಪ್ರೀಂ ಕೋರ್ಟ್ ತೀರ್ಪು ನೀಡುವುದಿಲ್ಲ ಎಂದು ಅದು ಹೇಳಿದೆ.

ಪ್ರಸ್ತುತ ಕರ್ನಾಟಕದ ಜಿಲ್ಲೆಯಾಗಿರುವ ಬೆಳಗಾವಿ ಭಾಷೆಯ ಆಧಾರದಲ್ಲಿ ಈ ಹಿಂದಿನ ಬಾಂಬೆ ಪ್ರಾಂತ್ಯಕ್ಕೆ ಸೇರಿದೆ ಎಂದು ಮಹಾರಾಷ್ಟ್ರ ಪ್ರತಿಪಾದಿಸುತ್ತಿದೆ. ಮಹಾರಾಷ್ಟ್ರ ಸಂಪುಟ ಸಚಿವರು ರವಿವಾರ ‘ಕಪ್ಪು ದಿನ’ಕ್ಕೆ ಬೆಂಬಲ ವ್ಯಕ್ತಪಡಿಸಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News