ಡೆಲ್ಲಿ ಜಯಭೇರಿ, ಪ್ಲೇ ಆಫ್ ಗೆ ಲಗ್ಗೆ

Update: 2020-11-02 18:11 GMT

ಅಬುಧಾಬಿ:  ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(54) ಹಾಗೂ ಅಜಿಂಕ್ಯ ರಹಾನೆ ಅರ್ಧ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ, ಕೋಲ್ಕತಾಕ್ಕಿಂತ ಉತ್ತಮ ರನ್ ರೇಟ್  ಹೊಂದಿರುವ ಉಭಯ ತಂಡಗಳು  ಪ್ಲೇ-ಆಫ್ ಗೆ ತೇರ್ಗಡೆಯಾಗಿವೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋತು ಕಂಗಾಲಾಗಿದ್ದ ಡೆಲ್ಲಿ ಸತತ ಎರಡನೇ ವರ್ಷ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ.

ಡೆಲ್ಲಿ ನವೆಂಬರ್ 5ರಂದು ದುಬೈನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಡೆಲ್ಲಿ ಗ್ರೂಪ್ ಹಂತದ 14 ಪಂದ್ಯಗಳಲ್ಲಿ 8ನೇ ಜಯ ಸಾಧಿಸಿ 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು.

ಗೆಲ್ಲಲು 154 ರನ್ ಗುರಿ ಪಡೆದಿದ್ದ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ವಿಕೆಟನ್ನು ಬೇಗನೆ ಕಳೆದುಕೊಂಡಿದ್ದರೂ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ 4 ವಿಕೆಟ್ ಗಳ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಡೆಲ್ಲಿ 19 ರನ್ ಗಳಿಸಿದ್ದಾಗ ಶಾ ವಿಕೆಟ್ ಕೈ ಚೆಲ್ಲಿದರು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿದ ಧವನ್(54, 41 ಎಸೆತ, 6 ಬೌಂಡರಿ)  ಹಾಗೂ ರಹಾನೆ(60 ರನ್, 46 ಎಸೆತ, 5 ಬೌಂ.)ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂಮೊದಲು ಐಪಿಎಲ್ ನ 55ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿತು. ಆರ್ ಸಿಬಿ ಪರ ದೇವದತ್ತ ಪಡಿಕ್ಕಲ್ ಬರೋಬ್ಬರಿ 50 ರನ್ ಗಳಿಸಿ(41 ಎಸೆತ, 5 ಬೌಂಡರಿ)ಅಗ್ರ ಸ್ಕೋರರ್ ಎನಿಸಿಕೊಂಡರು. ಎಬಿಡಿವಿಲಿಯರ್ಸ್(35, 21 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News