ರಿಪಬ್ಲಿಕ್ ಟಿವಿ ಟಿಆರ್‌ಪಿ ಹೆಚ್ಚಿಸಲು ತಿಂಗಳಿಗೆ 15 ಲಕ್ಷ ರೂ. ಪಾವತಿ!

Update: 2020-11-03 04:03 GMT

ಮುಂಬೈ, ನ.3: ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಆಯ್ದ ಕುಟುಂಬಗಳಿಗೆ ಸಹ ಆರೋಪಿಯೊಬ್ಬನ ಮೂಲಕ ಪ್ರತಿ ತಿಂಗಳು 15 ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತಿತ್ತು ಎನ್ನುವುದನ್ನು ಪ್ರಕರಣದ ಆರೋಪಿ, ಥಾಣೆಯ ಕೇಬಲ್ ವಿತರಕ ಒಪ್ಪಿಕೊಂಡಿದ್ದಾನೆ ಎಂದು ಟಿಆರ್‌ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.

ತಾನು ಹವಾಲಾ ಆಪರೇಟರ್‌ಗಳಿಂದ ಹಣ ಸ್ವೀಕರಿಸಿದ್ದಾಗಿಯೂ ಕ್ರಿಸ್ಟಲ್ ಬ್ರಾಡ್‌ಕಾಸ್ಟ್‌ನ ಮಾಲಕ ಆಶೀಶ್ ಚೌಧರಿ ಹೇಳಿದ್ದಾನೆ. ಈ ಬಗ್ಗೆ ತಪ್ಪೊಪ್ಪಿಗೆ ಸಾಕ್ಷಿಯಾಗಲು ತಾನು ಬಯಸಿರುವುದಾಗಿಯೂ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮ್ಯಾಕ್ಸ್‌ಮೀಡಿಯಾ ಎಂಬ ಮಾರಾಟ ಸಂಸ್ಥೆಯ ಅಭಿಷೇಕ್ ಕೊಲವಾಡೆ ಮತ್ತು ಚೌಧರಿಯ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಅಪರಾಧ ವಿಭಾಗ ಸಲ್ಲಿಸಿದ ಅರ್ಜಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಕೊಲವಾಡೆಯನ್ನು ವಿಚಾರಣೆಗೆ ಗುರಿಪಡಿಸಿದಾಗ ಸಿಕ್ಕಿದ ಮಾಹಿತಿ ಆಧಾರದಲ್ಲಿ ಅಕ್ಟೋಬರ್ 28ರಂದು ಚೌಧರಿಯನ್ನು ಬಂಧಿಸಲಾಗಿತ್ತು.

ಕೊಲವಾಡೆ ಪ್ರತಿ ತಿಂಗಳು ಚೌಧರಿಯಿಂದ 15 ಲಕ್ಷ ರೂಪಾಯಿ ಪಡೆಯುತ್ತಿದ್ದ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ ಹವಾಲಾ ಪಾವತಿ ಬಗ್ಗೆ ತನಿಖೆ ಮುಂದುವರಿದಿರುವುದರಿಂದ ಈ ಬಗ್ಗೆ ಈಗಲೇ ಯಾವ ವಿವರವನ್ನೂ ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಮ್‌ಜಿ ವರ್ಮಾ, ದಿನೇಶ್ ವಿಶ್ವಕರ್ಮ ಮತ್ತು ಉಮೇಶ್ ಮಿಶ್ರಾ ಎಂಬುವವರಿಗೆ ತಾನು ಈ ಹಣವನ್ನು ವಿತರಿಸಿದ್ದು, ಅವರು ಆ ಹಣವನ್ನು ವಿವಿಧ ಕುಟುಂಬಗಳಿಗೆ ಪಾವತಿಸಿದ್ದಾರೆ. ಗರಿಷ್ಠ ಅವಧಿಗೆ ರಿಪಬ್ಲಿಕ್ ಟಿವಿ ಆನ್ ಇರುವಂತೆ ಮಾಡುವ ಸಲುವಾಗಿ ಬಾರ್-ಓ-ಮೀಟರ್ ಅಳವಡಿಸಿದ ಕುಟುಂಬಗಳಿಗೆ ಈ ಹಣ ಪಾವತಿಯಾಗಿದೆ ಎಂದು ಕೊಲವಾಡೆ ವಿವರಿಸಿದ್ದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.

2017 ಮತ್ತು 2020ರ ನಡುವೆ ವಾವ್ ಮ್ಯೂಸಿಕ್ ಹಾಗೂ ರಿಪಬ್ಲಿಕ್ ಭಾರತ್ ಹಿಂದಿ ಸುದ್ದಿವಾಹಿನಿಯಿಂದ ಈ ಹಣ ಪಡೆದಿದ್ದಾಗಿ ಕೊಲವಾಡೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News