×
Ad

ಗಣಿಯಲ್ಲಿ ಎರಡು ವಜ್ರಗಳನ್ನು ಶೋಧಿಸಿದ ಇಬ್ಬರು ಕಾರ್ಮಿಕರಿಗೆ ಕುಬೇರರಾಗುವ ಅದೃಷ್ಟ

Update: 2020-11-03 19:36 IST
 ಫೋಟೊ ಕೃಪೆ: twitter.com

ಪನ್ನಾ(ಮ.ಪ್ರ),ನ.3: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿನ ಗಣಿಗಳಿಂದ ಎರಡು ವಜ್ರಗಳನ್ನು ಹೊರತೆಗೆದಿರುವ ಇಬ್ಬರು ಕಾರ್ಮಿಕರಿಗೆ ಈಗ ಕುಬೇರರಾಗುವ ಅದೃಷ್ಟ ಕೂಡಿಬಂದಿದೆ.

ಜರುವಾಪುರದ ಗಣಿಯಲ್ಲಿ ದಿಲೀಪ್ ಮಿಸ್ತ್ರಿಗೆ 7.44 ಕ್ಯಾರಟ್‌ನ ಮತ್ತು ಕೃಷ್ಣ ಕಲ್ಯಾಣಪುರ ಪ್ರದೇಶದಲ್ಲಿ ಲಖನ್ ಯಾದವ್ ಗೆ 14.98 ಕ್ಯಾರಟ್‌ನ ವಜ್ರದ ಕಲ್ಲುಗಳು ಲಭಿಸಿವೆ ಎಂದು ವಜ್ರ ಪರಿಶೋಧಕ ಅನುಪಮ್ ಸಿಂಗ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 ಕಾರ್ಮಿಕರು ಈ ವಜ್ರದ ಕಲ್ಲುಗಳನ್ನು ಸೋಮವಾರ ವಜ್ರ ಕಚೇರಿಗೆ ಒಪ್ಪಿಸಿದ್ದು,ಇವುಗಳನ್ನು ಹರಾಜು ಹಾಕಲಾಗುವುದು ಮತ್ತು ಶೇ.12.5 ರಾಯಧನವನ್ನು ಕಡಿತ ಮಾಡಿ ಉಳಿದ ಹಣವನ್ನು ಅವರಿಗೆ ನೀಡಲಾಗುವುದು. ಅಧಿಕಾರಿಗಳು ಈ ವಜ್ರಗಳ ನಿಖರ ಮೌಲ್ಯಗಳನ್ನು ನಿರ್ಧರಿಸಲಿದ್ದಾರೆ. 7.44 ಕ್ಯಾರಟ್‌ ನ ವಜ್ರದ ಕಲ್ಲು ಸುಮಾರು 30 ಲ.ರೂ.ಗೆ ಮತ್ತು 14.98 ಕ್ಯಾರಟ್‌ನ ವಜ್ರದ ಕಲ್ಲು ಅದರ ಇಮ್ಮಡಿ ಬೆಲೆಗೆ ಹರಾಜಾಗುವ ನಿರೀಕ್ಷೆಯಿದೆ ಎಂದರು.

ತನ್ಮಧ್ಯೆ ಈ ವಜ್ರದ ಕಲ್ಲುಗಳನ್ನು ಶೋಧಿಸಿರುವ ಬಡಕಾರ್ಮಿಕರ ಸಂಭ್ರಮಕ್ಕೆ ಮೇರೆಯೇ ಇಲ್ಲದಂತಾಗಿದೆ.

ಎರಡು ಎಕರೆ ಭೂಮಿಯನ್ನು ಹೊಂದಿರುವ ಸಣ್ಣರೈತ ಲಖನ್ ಯಾದವ್ ಗೆ ಇದೇ ಮೊದಲ ಬಾರಿ ವಜ್ರದ ಕಲ್ಲು ಸಿಕ್ಕಿದೆ. ವಜ್ರದ ಮಾರಾಟದಿಂದ ದೊರೆಯುವ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ಬಳಸುವುದಾಗಿ ಯಾದವ ತಿಳಿಸಿದರು.

‘ನಾನು ಸೇರಿದಂತೆ ನಾಲ್ವರು ಒಂದು ತಂಡವಾಗಿ ಕಳೆದ ಆರು ತಿಂಗಳುಗಳಿಂದಲೂ ನಮ್ಮ ಜಮೀನಿನಲ್ಲಿ ವಜ್ರಗಳನ್ನು ಶೋಧಿಸಲು ಕಠಿಣ ಪರಿಶ್ರಮವನ್ನು ಪಟ್ಟಿದ್ದೆವು. ದೇವರ ದಯದಿಂದ ಇದೇ ಮೊದಲ ಬಾರಿಗೆ ನನಗೆ ಉತ್ತಮ ಗುಣಮಟ್ಟದ ವಜ್ರದ ಕಲ್ಲು ದೊರಕಿದೆ ’ ಎಂದು ದಿಲೀಪ್ ಮಿಸ್ತ್ರಿ ಹೇಳಿದರು.

 ಬುಂದೇಲಖಂಡದ ಹಿಂದುಳಿದ ಪ್ರದೇಶದಲ್ಲಿರುವ ಪನ್ನಾ ತನ್ನ ವಜ್ರದ ಗಣಿಗಳಿಗಾಗಿ ಖ್ಯಾತಿಯನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News