ಚೀನಾ ಗಡಿಯಲ್ಲಿರುವ ಭಾರತದ ಯೋಧರಿಗೆ ತೀವ್ರ ಚಳಿಯಿಂದ ರಕ್ಷಣೆ ನೀಡಲು ಅಮೆರಿಕದಿಂದ ಉಡುಪುಗಳ ಆಮದು

Update: 2020-11-03 17:19 GMT

ಹೊಸದಿಲ್ಲಿ,ನ.3: ಚೀನಾ ಗಡಿಯಲ್ಲಿ ನಿಯೋಜಿತ ತನ್ನ ಯೋಧರಿಗಾಗಿ ತೀವ್ರ ಚಳಿಯಿಂದ ರಕ್ಷಣೆ ನೀಡುವ ಉಡುಪುಗಳ ಮೊದಲ ಕಂತು ಅಮೆರಿಕದಿಂದ ಭಾರತವನ್ನು ತಲುಪಿದ್ದು,ಇದರೊಂದಿಗೆ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚೀನಾದ ವಿರುದ್ಧ ಭಾರತದ ಯುದ್ಧ ಸನ್ನದ್ಧತೆಗೆ ಹೆಚ್ಚಿನ ಬಲ ದೊರಕಿದಂತಾಗಿದೆ.

 ಅಮೆರಿಕದ ರಕ್ಷಣಾ ಪಡೆಗಳಿಂದ ತರಿಸಿಕೊಳ್ಳಲಾಗಿರುವ ಈ ಉಡುಪುಗಳನ್ನು ಎಲ್‌ಎಸಿಯಲ್ಲಿಯ ನಮ್ಮ ಯೋಧರು ಬಳಸುತ್ತಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದವು. ಪಶ್ಚಿಮದ ಸಿಯಾಚಿನ್ ಮತ್ತು ಪೂರ್ವ ಲಡಾಖ್ ಕ್ಷೇತ್ರ ಸೇರಿದಂತೆ ಇಡೀ ಲಡಾಖ್‌ನಲ್ಲಿ ನಿಯೋಜಿಸಲಾಗಿರುವ ಯೋಧರ ಬಳಕೆಗಾಗಿ ಭಾರತೀಯ ಸೇನೆಯು ಇಂತಹ ಉಡುಪುಗಳ 60,000 ಸೆಟ್‌ಗಳ ದಾಸ್ತಾನನ್ನು ಹೊಂದಿದೆ ಎಂದೂ ಅವು ಹೇಳಿದವು. ಈ ವರ್ಷ ಎಲ್‌ಎಸಿಯಲ್ಲಿ ಚೀನಿ ಸೇನೆಯ ಆಕ್ರಮಣಕಾರಿ ಧೋರಣೆಯಿಂದಾಗಿ ಪ್ರದೇಶದಲ್ಲಿ ಸುಮಾರು 90,000 ಯೋಧರನ್ನು ನಿಯೋಜಿಸಿರುವುದರಿಂದ ತೀವ್ರ ಚಳಿಯಿಂದ ರಕ್ಷಣೆ ನೀಡುವ ಈ ಉಡುಪುಗಳ 30,000 ಸೆಟ್‌ಗಳ ಹೆಚ್ಚುವರಿ ಅಗತ್ಯವಿದೆ.

ಭಾರತವು ಎಲ್‌ಎಸಿಯಲ್ಲಿ ಎರಡು ಹೆಚ್ಚುವರಿ ಡಿವಿಜನ್‌ಗಳನ್ನು ನಿಯೋಜಿಸಿದೆ.

ಭಾರತವು ತನ್ನ ಪದಾತಿ ಪಡೆಗಳಿಗಾಗಿ ಅಸಾಲ್ಟ್ ರೈಫಲ್‌ಗಳು ಮತ್ತು ಸಿಗ್ ಸಾಯರ್ ಅಸಾಲ್ಟ್ ರೈಫಲ್‌ಗಳು ಸೇರಿದಂತೆ ಬಹಳಷ್ಟು ರಕ್ಷಣಾ ಉಪಕರಣಗಳನ್ನು ಅಮೆರಿಕದಿಂದ ಪಡೆದುಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News