ಚುನಾವಣೆಯನ್ನು ನಾವು ಗೆದ್ದಿದ್ದೇವೆ, ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ: ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಘೋಷಣೆ

Update: 2020-11-04 17:12 GMT

ವಾಶಿಂಗ್ಟನ್, ನ. 4: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಲಕ್ಷಾಂತರ ಮತಗಳ ಎಣಿಕೆ ಬಾಕಿಯಿರುವಂತೆಯೇ, ನಾನು ವಿಜಯಿಯಾಗಿದ್ದೇನೆ ಎಂಬುದಾಗಿ ದೇಶದ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಮುಂಜಾನೆ ತಪ್ಪಾಗಿ ಘೋಷಿಸಿದ್ದಾರೆ.

ಇದಕ್ಕೂ ಮೊದಲು ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ನನ್ನ ವಿಜಯದ ಬಗ್ಗೆ ನನಗೆ ಭರವಸೆಯಿದೆ ಎಂದು ಹೇಳಿದರು ಹಾಗೂ ಮತ ಎಣಿಕೆ ಪೂರ್ಣಗೊಳ್ಳಲು ಸಮಯ ತಗಲಬಹುದು ಎಂದು ಹೇಳಿದರು.

ಇದರ ಬೆನ್ನಿಗೇ ಶ್ವೇತಭವನದಲ್ಲಿ ಕಾಣಿಸಿಕೊಂಡ ಟ್ರಂಪ್, ನಾನು ವಿಜಯಿಯಾಗಿದ್ದೇನೆ ಎಂದು ಘೋಷಿಸಿದರು ಹಾಗೂ ನಾನು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಎಂದರು.

‘‘ಈ ಚುನಾವಣೆಯನ್ನು ಗೆಲ್ಲಲು ನಾವು ತಯಾರಾಗುತ್ತಿದ್ದೆವು. ಪ್ರಾಮಾಣಿಕವಾಗಿ ಹೇಳುವುದಾದರೆ, ನಾವು ಈ ಚುನಾವಣೆಯನ್ನು ಗೆದ್ದಿದ್ದೇವೆ’’ ಎಂದು ಶ್ವೇತಭವನದಲ್ಲಿ ಮುಂಜಾನೆ 2:30ಕ್ಕೆ ಅಸಾಧಾರಣ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ಇದು ನಮ್ಮ ದೇಶಕ್ಕೆ ಮಾಡಿದ ದೊಡ್ಡ ವಂಚನೆಯಾಗಿದೆ. ಸರಿಯಾದ ರೀತಿಯಲ್ಲಿ ಕಾನೂನನ್ನು ಬಳಸಲು ನಾವು ಬಯಸಿದ್ದೇವೆ. ಹಾಗಾಗಿ, ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದೇವೆ. ಎಲ್ಲ ಮತದಾನ ನಿಲ್ಲಬೇಕೆಂದು ನಾವು ಬಯಸುತ್ತೇವೆ’’ ಎಂದು ಅಧ್ಯಕ್ಷರು ಹೇಳಿದರು.

ಇದಕ್ಕೂ ಮೊದಲು ಅವರು ತನ್ನ ಕುಟುಂಬ ಸದಸ್ಯರೊಂದಿಗೆ ಶ್ವೇತಭವನ ನಿವಾಸದಲ್ಲಿ ಚುನಾವಣಾ ಫಲಿತಾಂಶವನ್ನು ವೀಕ್ಷಿಸುತ್ತಿದ್ದರು.

ಟ್ರಂಪ್ ಘೋಷಣೆ ‘ಆಘಾತಕಾರಿ’, ‘ಅಭೂತಪೂರ್ವ’

ಬೈಡನ್ ಪ್ರಚಾರ ತಂಡದಿಂದ ತಿರುಗೇಟು

ಚುನಾವಣೆಯಲ್ಲಿ ತಾನು ವಿಜಯಿಯಾಗಿದ್ದೇನೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಘೋಷಣೆಗೆ ತಿರುಗೇಟು ನೀಡಿರುವ ಪ್ರತಿಸ್ಪರ್ಧಿ ಜೋ ಬೈಡನ್ ಪ್ರಚಾರ ತಂಡವು, ಮತ ಎಣಿಕೆಯನ್ನು ನಿಲ್ಲಿಸುವ ಅಧ್ಯಕ್ಷರ ಪ್ರಯತ್ನವು ‘ಆಘಾತಕಾರಿ’ ಮತ್ತು ‘ಅಭೂತಪೂರ್ವ’ ಎಂಬುದಾಗಿ ಬಣ್ಣಿಸಿದೆ.

ಇದರ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಡಲು ನಮ್ಮ ಕಾನೂನು ತಂಡವು ಸಿದ್ಧವಾಗಿದೆ ಎಂದು ಹೇಳಿದೆ.

‘‘ಮತ ಎಣಿಕೆ ಮುಗಿಯುವುದಿಲ್ಲ. ಕ್ರಮಬದ್ಧವಾಗಿ ಚಲಾವಣೆಯಾದ ಪ್ರತಿ ಮತದ ಎಣಿಕೆಯಾಗುವವರೆಗೆ ಮತ ಎಣಿಕೆ ಮುಂದುವರಿಯುತ್ತದೆ’’ ಎಂದು ಬೈಡನ್ ತಂಡ ಹೇಳಿದೆ.

ಚಲಾವಣೆಯಾಗಿರುವ ಎಲ್ಲ ಮತಗಳ ಎಣಿಕೆಯಾಗಬೇಕೆಂದು ಅಮೆರಿಕದ ಚುನಾವಣಾ ಕಾನೂನು ಹೇಳುತ್ತದೆ. ಸಾಮಾನ್ಯವಾಗಿ ಹಲವು ರಾಜ್ಯಗಳು ಮತಗಳನ್ನು ಎಣಿಸಲು ಹಲವು ದಿನಗಳನ್ನೇ ತೆಗೆದುಕೊಳ್ಳುತ್ತವೆ. ಈ ಬಾರಿ ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೆಚ್ಚಿನವರು ಅಧಿಕೃತ ಮತದಾನ ದಿನಾಂಕಕ್ಕೆ ಮುಂಚಿತವಾಗಿಯೇ ಅಂಚೆ ಮತಗಳನ್ನು ಚಲಾಯಿಸಿರುವುದರಿಂದ ಹೆಚ್ಚಿನ ಮತಗಳನ್ನು ಎಣಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News