×
Ad

ಪರಿಸರ ಸೂಕ್ಷ್ಮ ವಲಯದ 50 ಕಿ.ಮೀ.ವಿಸ್ತೀರ್ಣದಲ್ಲಿ ಗಣಿಗಾರಿಕೆಯ ಇ-ಹರಾಜಿಗೆ ಅವಕಾಶವಿಲ್ಲ: ಸುಪ್ರೀಂ ಇಂಗಿತ

Update: 2020-11-04 23:00 IST

ಹೊಸದಿಲ್ಲಿ,ನ.4: ಜಾರ್ಖಂಡ್‌ನಲ್ಲಿ ಪರಿಸರ ಸೂಕ್ಷ್ಮ ವಲಯದ 50 ಕಿ.ಮೀ.ವಿಸ್ತೀರ್ಣದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಯಾವುದೇ ಉದ್ದೇಶಿತ ಗಣಿಯನ್ನು ಇ-ಹರಾಜು ಮಾಡಕೂಡದು ಎಂದು ತಾನು ಆದೇಶಿಸಲು ಉದ್ದೇಶಿಸಿರುವುದಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಹೇಳಿದೆ.

ಅರಣ್ಯ ನಾಶವಾಗುವುದಿಲ್ಲ ಎನ್ನುವುದನ್ನು ಖಚಿತ ಪಡಿಸಲಿಕ್ಕಷ್ಟೇ ತಾನು ಬಯಸಿರುವುದಾಗಿ ತಿಳಿಸಿದ ಮು.ನ್ಯಾ.ಎಸ್.ಎ.ಬೋಬ್ಡೆ ನೇತೃತ್ವದ ಪೀಠವು,ಜಾರ್ಖಂಡ್‌ನಲ್ಲಿ ಉದ್ದೇಶಿತ ಗಣಿಗಾರಿಕೆ ನಿವೇಶನಕ್ಕೆ ಸಮೀಪದ ಯಾವುದೇ ಪ್ರದೇಶವು ಪರಿಸರ ಸೂಕ್ಷ್ಮವಲಯವಾಗಲು ಅರ್ಹತೆ ಪಡೆದಿದೆಯೇ ಎನ್ನುವುದನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸುವ ಬಗ್ಗೆ ತಾನು ಚಿಂತನೆ ನಡೆಸಿರುವುದಾಗಿಯೂ ಹೇಳಿತು.

ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ವಿರೋಧಿಸಿದ ಕೇಂದ್ರವು,ಅಂತರದ ಮಾನದಂಡವನ್ನು ಅನ್ವಯಿಸಿದರೆ ಗೋವಾದಂತಹ ರಾಜ್ಯಗಳಲ್ಲಿ ಗಣಿಗಾರಿಕೆ ಅಸಾಧ್ಯವಾಗುತ್ತದೆ ಎಂದು ಬಲವಾಗಿ ಪ್ರತಿಪಾದಿಸಿತು.

ಗಣಿಗಾರಿಕೆ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಮೀಪದಲ್ಲಿದೆ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದರೆ ದೇಶದ ಇತರ ಕಡೆಗಳಲ್ಲಿಯೂ ಅಂತಹ ಕಲ್ಲಿದ್ದಲು ಗಣಿಗಳ ಇ-ಹರಾಜಿಗೆ ತಾನು ತಡೆಯಾಜ್ಞೆಯನ್ನು ನೀಡಬಹುದು ಎಂದು ವಾಣಿಜ್ಯ ಉದ್ದೇಶಗಳಿಗಾಗಿ ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಜಾರ್ಖಂಡ್ ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಪೀಠವು ತಿಳಿಸಿತು.

ಪೀಠವು ಜಾರ್ಖಂಡ್‌ನ ಅರ್ಜಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಮತ್ತು ಇತರ ಸಂಬಂಧಿತ ವಿಷಯಗಳನ್ನು ತನ್ನೆದುರು ಮಂಡಿಸಲು ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರಿಗೆ ಶುಕ್ರವಾರದವರೆಗೆ ಸಮಯಾವಕಾಶವನ್ನು ನೀಡಿತು.

ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿರುವ ಜಾರ್ಖಂಡ್‌ನ ಉದ್ದೇಶ ಏನು ಎನ್ನುವುದು ತನಗೆ ತಿಳಿದಿಲ್ಲ,ಆದರೆ ಅರಣ್ಯಗಳು ನಾಶವಾಗದಂತೆ ನೋಡಿಕೊಳ್ಳಲು ತಾನು ಬಯಸಿದ್ದೇನೆ ಎಂದ ಪೀಠವು,ಈ ವಿಷಯದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ತುಂಬ ಉತ್ಸಾಹಿಯಾಗಿರುವಂತೆ ಕಂಡು ಬರುತ್ತಿದೆ,ಆದರೆ ಛೋಟಾನಾಗ್ಪುರ ಗೇಣಿ ಕಾಯ್ದೆಯ ಲಾಭವನ್ನು ಪಡೆದುಕೊಳ್ಳಲು ಅವರಿಗೂ ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟವಾಗಬೇಕು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News