ವೀಡಿಯೊದಲ್ಲಿ ಎಂಜಿಆರ್ ಫೋಟೊ ಬಳಸಿದ ಬಿಜೆಪಿಗೆ ಅದರದ್ದೇ ನಾಯಕರಿಲ್ಲವೇ ?: ಎಐಎಡಿಎಂಕೆ ಪ್ರಶ್ನೆ

Update: 2020-11-04 17:33 GMT

ಚೆನ್ನೈ, ನ.4: ತನ್ನ ‘ವೇಲ್ ಯಾತ್ರಾ’ ಪ್ರಚಾರ ಮಾಡುವ ವೀಡಿಯೊದಲ್ಲಿ ಎಐಎಡಿಎಂಕೆ ಸ್ಥಾಪಕ ಹಾಗೂ ನಟ ಎಂ.ಜಿ. ರಾಮಚಂದ್ರನ್ ಅವರ ಫೋಟೊ ಬಳಸಿರುವ ತನ್ನ ಮಿತ್ರ ಪಕ್ಷವಾದ ಬಿಜೆಪಿಯನ್ನು ಎಐಎಡಿಎಂಕೆ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ‘ಅವರಿಗೆ ಅವರದ್ದೇ ನಾಯಕರಿಲ್ಲವೇ ?’ ಎಂದು ಪ್ರಶ್ನಿಸಿರುವ ಎಐಎಡಿಎಂಕೆಯ ಸಚಿವ ಡಿ. ಜಯಕುಮಾರ್, ಎಂಜಿಆರ್ ಫೋಟೊವನ್ನು ಬಳಸಲು ಇತರ ಪಕ್ಷಗಳಿಗೆ ನೈತಿಕ ಹಕ್ಕಿಲ್ಲ ಎಂದಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಸಾಂಸ್ಕೃತಿಕ ಘಟಕ ಕಳೆದ ವಾರ ಬಿಡುಗಡೆ ಮಾಡಿದೆ ಮೂರು ನಿಮಿಷಗಳ ಸಂಗೀತ ವೀಡಿಯೊದಲ್ಲಿ ಎಂಜಿಆರ್ ಅವರ ಫೋಟೊ ತೋರಿಸಲಾಗುತ್ತದೆ. ತಮಿಳಿನಲ್ಲಿರುವ ಇಲ್ಲಿನ ಸಾಹಿತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಪೊನ್ಮನಚೆಮ್ಮಲ್’ನ ‘ಹಂಸ’ (ಸಂದೇಶವಾಹಕನನ್ನು ಸೂಚಿಸುವುದು) ಎಂದು ಉಲ್ಲೇಖಿಸಲಾಗಿದೆ.

ಎಐಎಡಿಎಂಕೆಯ ರಾಜಕೀಯ ರ‍್ಯಾಲಿಗಳು ಹಾಗೂ ಪಕ್ಷದ ಸಾಹಿತ್ಯದಲ್ಲಿ ಎಂಜಿಆರ್ ಅವರನ್ನು ಉಲ್ಲೇಖಿಸಲು ಈ ಹೆಸರು ಬಳಸುವುದು ಜನಪ್ರಿಯವಾಗಿದೆ. ‘‘ಅವರಿಗೆ ಅವರದ್ದೇ ನಾಯಕರಿಲ್ಲವೇ ? ಅವರು ನಮ್ಮ ನಾಯಕರ ಫೋಟೊವನ್ನು ಬಳಸುತ್ತಿರುವುದು ಯಾಕೆ ? ಎಐಎಡಿಎಂಕೆಯನ್ನು ಸ್ಥಾಪಿಸಿರುವುದು ಹಾಗೂ ರಾಜ್ಯದಲ್ಲಿ ಪಕ್ಷ ಜಯಗಳಿಸಬೇಕು ಎಂದು ಬಯಸಿದ್ದ ಎಂಜಿಆರ್ ನಮ್ಮ ನಾಯಕರು. ಅವರ ಫೋಟೊವನ್ನು ಬಳಸುವ ನೈತಿಕ ಹಕ್ಕು ಯಾರಿಗೂ ಇಲ್ಲ’’ ಎಂದು ಜಯ ಕುಮಾರ್ ಹೇಳಿದ್ದಾರೆ. ಈ ನಡುವೆ ‘ವೇಲ್ ಯಾತ್ರೆ’ ಮೂಲಕ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಿಸಿಕೆ ಹಾಗೂ ಎಡ ಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News