ಆರ್‌ಟಿಐ ಕಾರ್ಯಕರ್ತನ ವೈಯಕ್ತಿಕ ಮಾಹಿತಿ ವೆಬ್‌ಸೈಟ್‌ನಲ್ಲಿ ಬಹಿರಂಗ: ತನಿಖೆ ನಡೆಸುವಂತೆ ಎಂಐಬಿಗೆ ಹೈಕೋರ್ಟ್ ನಿರ್ದೇಶನ
ಮುಂಬೈ: ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರ ವೈಯಕ್ತಿಕ ಮಾಹಿತಿಯನ್ನು ವೆಬ್‌ಸೈಟ್‌ನಿಂದ ತೆಗೆದುಹಾಕುವಂತೆ ನಿರ್ದೇಶನವನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ(ಎಂಐಬಿ)ಗುರುವಾರ ನಿರ್ದೇಶನ ನೀಡಿದೆ.
ಸೂಕ್ತ ತನಿಖೆಯನ್ನು ಖಚಿತಪಡಿಸಿಕೊಳ್ಳುವುದು ಸಚಿವಾಲಯದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿಯನ್ನು ತನ್ನ ಕಾರ್ಯದರ್ಶಿಯ ಮುಂದೆ ಇಟ್ಟು, ಮೂರು ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ,ಎಂಐಬಿಯನ್ನು ಕೇಳಿದೆ. ಯಾವುದೇ ವಿಚಾರಣೆಗೆ ಆದೇಶಿಸದೇ ಇದ್ದರೆ ಪರಿಹಾರ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಲು ಕಾರ್ಯಕರ್ತನಿಗೆ ನ್ಯಾಯಪೀಠ ಸ್ವಾತಂತ್ರ್ಯ ನೀಡಿತು.
ಆರ್‌ಟಿಐ ಕಾರ್ಯಕರ್ತನಿಗೆ ವೆಚ್ಚದ ಮೊತ್ತ 25,000 ರೂ.ನೀಡುವಂತೆಯೂ ಸಚಿವಾಲಯಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ವೈಯಕ್ತಿಕ ಮಾಹಿತಿ ಸೋರಿಕೆಯಾದ ಕಾರಣ ಉಂಟಾಗಿರುವ ಮಾನಸಿಕ ಆಘಾತ, ಸಂಕಟ ಹಾಗೂ ಜೀವ ಬೆದರಿಕೆಗಾಗಿ ಸಲ್ಲಿಸಿರುವ 50 ಲಕ್ಷ ರೂ. ಪರಿಹಾರವನ್ನು ನೀಡುವ ವಿಚಾರವನ್ನು ಸಿವಿಲ್ ನ್ಯಾಯಾಲಯಕ್ಕೆ ನಿರ್ಧರಿಸಲು ಬಿಡಲಾಗಿದೆ.