ಸರಕಾರಿ ಉದ್ಯೋಗಗಳ ಆಮಿಷವೊಡ್ಡಿ 27,000 ಕ್ಕೂ ಅಧಿಕ ಮಂದಿಗೆ ವಂಚಿಸಿದ್ದ ಐವರ ಸೆರೆ
ಹೊಸದಿಲ್ಲಿ,ನ.5: ನಕಲಿ ಜಾಲತಾಣದ ಮೂಲಕ ಸರಕಾರಿ ಉದ್ಯೋಗಗಳ ಆಮಿಷವನ್ನೊಡ್ಡಿ 27,000ಕ್ಕೂ ಅಧಿಕ ಜನರಿಗೆ ಒಟ್ಟು 1.09 ಕೋ.ರೂ.ಗಳನ್ನು ವಂಚಿಸಿದ್ದ ಜಾಲದ ಐವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 49 ಲ.ರೂ.ಹಣ,ಏಳು ಮೊಬೈಲ್ ಫೋನ್‌ಗಳು ಮತ್ತು ಮೂರು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಷ್ಣು ಶರ್ಮಾ ಮತ್ತು ರಾಮಧಾರಿ ಎನ್ನುವವರ ನೇತೃತ್ವದಲ್ಲಿ ಹರ್ಯಾಣದ ಹಿಸ್ಸಾರ್‌ನಿಂದ ಈ ಜಾಲವು ಕಾರ್ಯಾಚರಿಸುತ್ತಿತ್ತು. ರಾಮಧಾರಿ,ಸಂದೀಪ,ಸುರೇಂದ್ರ ಸಿಂಗ್ ಮತ್ತು ಜೋಗಿಂದರ್ ಸಿಂಗ್ ಅವರನ್ನು ಹರ್ಯಾಣ ಮತ್ತು ದಿಲ್ಲಿಯ ವಿವಿಧೆಡೆಗಳಿಂದ ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ವಿಷ್ಣು ಶರ್ಮಾನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಜಾಲದ ಇನ್ನೋರ್ವ ಸದಸ್ಯ ಅಮನದೀಪ್ ಎಂಬಾತನನ್ನು ಈ ಮೊದಲೇ ಹಿಸ್ಸಾರ್‌ನ ಎಟಿಎಂ ಒಂದರಿಂದ ಹಣವನ್ನು ತೆಗೆಯುತ್ತಿದ್ದಾಗಲೇ ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಗಳ ಆಧಾರದಲ್ಲಿ ಪೊಲೀಸರು ಇತರರನ್ನು ಬಂಧಿಸಿದ್ದಾರೆ.
ಆರೋಪಿಗಳು ಸ್ವಾಸ್ಥ ಏವಂ ಜನಕಲ್ಯಾಣ ಸಂಸ್ಥಾನ ಹೆಸರಿನಲ್ಲಿ ನಕಲಿ ಜಾಲತಾಣವನ್ನು ಸೃಷ್ಟಿಸಿ 13,000 ನಕಲಿ ಸರಕಾರಿ ಹುದ್ದೆಗಳ ಕೊಡುಗೆಯನ್ನು ಅಮಾಯಕ ಉದ್ಯೋಗಾಕಾಂಕ್ಷಿಗಳ ಮುಂದಿರಿಸಿದ್ದರು. ಸಂಸ್ಥೆಯು ಕೇಂದ್ರ ಕುಟುಂಬ ಆರೋಗ್ಯ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು. ನೋಂದಾವಣೆಗಾಗಿ ಉದ್ಯೋಗಾಕಾಂಕ್ಷಿಗಳಿಗೆ ನಕಲಿ ವೆಬ್‌ಸೈಟ್‌ನ ಲಿಂಕ್‌ನೊಂದಿಗೆ 15 ಲಕ್ಷಕ್ಕೂ ಅಧಿಕ ಎಸ್‌ಎಂಎಸ್‌ಗಳನ್ನು ರವಾನಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಆರೋಪಿಗಳಿಂದ ವಂಚನೆಗೊಳಗಾದವರು ದಿಲ್ಲಿ ಪೊಲೀಸ್‌ನ ಸೈಬರ್ ಘಟಕಕ್ಕೆ ದೂರು ಸಲ್ಲಿಸಿದ ಬಳಿಕ ಮೋಸ ಬೆಳಕಿಗೆ ಬಂದಿತ್ತು.
ಸಾಫ್ಟ್‌ವೇರ್ ವೃತ್ತಿಪರರಾದ ಜೋಗಿಂದರ್ ಮತ್ತು ಸಂದೀಪ ನಕಲಿ ಜಾಲತಾಣವನ್ನು ವಿನ್ಯಾಸಗೊಳಿಸಿದ್ದರು. ಸುರೇಂದ್ರ ಮಾಲಿಕತ್ವದಡಿ ಸ್ವಾಸ್ಥ ಸಂಸ್ಥಾನದ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನೂ ತೆರೆಯಲಾಗಿತ್ತು. ವಿವಿಧ ಎಟಿಎಮ್‌ಗಳಿಂದ ಹಣವನ್ನು ತೆಗೆಯುವ ಕೆಲಸವನ್ನು ಅಮನದೀಪ್‌ಗೆ ವಹಿಸಲಾಗಿತ್ತು ಮತ್ತು ಆರೋಪಿಗಳು ಪ್ರತಿದಿನ ಈ ಹಣವನ್ನು ಹಂಚಿಕೊಳ್ಳುತ್ತಿದ್ದರು.
ವಿಷ್ಣು ಶರ್ಮಾ ಮತ್ತು ರಾಮಧಾರಿ ಆನ್‌ಲೈನ್ ಪರೀಕ್ಷಾ ಕೇಂದ್ರವೊಂದನ್ನು ನಡೆಸುತ್ತಿದ್ದು,ಸರಕಾರಿ ನೇಮಕಾತಿಗಳನ್ನು ಮಾಡಲು ಹೊರಗುತ್ತಿಗೆಯನ್ನು ಪಡೆದುಕೊಂಡಿದ್ದರು ಮತ್ತು ತಮ್ಮ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುತ್ತಿದ್ದ ಉದ್ಯೋಗಾಕಾಂಕ್ಷಿಗಳ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದೂ ಪೊಲೀಸರು ತಿಳಿಸಿದರು.
ನಕಲಿ ಜಾಲತಾಣವೆಂದು ಗೊತ್ತಾಗದೆ ಅದರಲ್ಲಿಯ ಖಾಲಿ ಹುದ್ದೆಗಳ ಮಾಹಿತಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳೂ ಪ್ರಕಟಿಸಿದ್ದು,ಇದು ಹೆಚ್ಚು ಜನರು ವಂಚನೆಗೆ ಗುರಿಯಾಗಲು ಕಾರಣವಾಗಿತ್ತು.