ಟ್ರಂಪ್ ಶ್ವೇತಭವನ ಭಾಷಣ ಪ್ರಸಾರ ಅರ್ಧದಲ್ಲಿಯೇ ನಿಲ್ಲಿಸಿದ ಹಲವು ಚಾನೆಲುಗಳು
ವಾಷಿಂಗ್ಟನ್: ಅಮೆರಿಕಾದ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆಧಾರರಹಿತ ಆರೋಪಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಶ್ವೇತಭವನದ ಭಾಷಣದಲ್ಲಿ ಮಾಡುತ್ತಿದ್ದಂತೆಯೇ ಈ ಭಾಷಣದ ನೇರ ಪ್ರಸಾರ ಮಾಡುತ್ತಿದ್ದ ದೇಶದ ಖ್ಯಾತ ಮಾಧ್ಯಮ ಸಂಸ್ಥೆಗಳು ತಮ್ಮ ನೇರಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದವು. ಹೀಗೆ ಅಧ್ಯಕ್ಷರ ಭಾಷಣದ ನೇರ ಪ್ರಸಾರ ನಿಲ್ಲಿಸಿದ ಮಾಧ್ಯಮಗಳ ಪೈಕಿ ಎಬಿಸಿ, ಸಿಬಿಎಸ್, ಎನ್‍ಬಿಸಿ ಹಾಗೂ ಯುಎಸ್‍ಎ ಟುಡೆ ಸೇರಿದ್ದವು.
ಚುನಾವಣೆಯನ್ನು ತಮ್ಮಿಂದ ಕಸಿಯಲಾಗುತ್ತಿದೆ ಎಂದು ತಮ್ಮ ಶ್ವೇತಭವನ ಭಾಷಣದಲ್ಲಿ ಟ್ರಂಪ್ ಹೇಳಿದರು. ಎಂಎಸ್‍ಎನ್‍ಬಿಸಿಯ ಬ್ರಿಯಾನ್ ವಿಲಿಯಮ್ಸ್ ಅವರು ಟ್ರಂಪ್ ಅವರ ಭಾಷಣ ತಡೆಯಲು ಯತ್ನಿಸಿದರೆ, ಫಾಕ್ಸ್ ನ್ಯೂಸ್ ಚಾನೆಲ್ ಹಾಗೂ ಸಿಎನ್‍ಎನ್ ಅವರ ಭಾಷಣವನ್ನು ಸಂಪೂರ್ಣ ಪ್ರಸಾರ ಮಾಡಿದವು. ಆದರೆ ಸಿಎನ್‍ಎನ್ ಸಂಸ್ಥೆಯ ಆಂಡರ್ಸನ್ ಕೂಪರ್ ಈ ಕುರಿತು ಮಾತನಾಡಿ "ಬಿಸಿಲಿನ ಝಳಕ್ಕೆ ಬೆಂಡಾಗಿ ತನ್ನ ಸಮಯ ಮುಗಿಯಿತೆಂದು ರೋದಿಸುವ ತಲೆ ಕೆಳಗಾಗಿ ಬಿದ್ದ ಆಮೆಯಂತೆ ಟ್ರಂಪ್ ಆಗಿದ್ದಾರೆ,'' ಎಂದು ಹೇಳಿದ್ದಾರೆ.
"ಆಧಾರವಿಲ್ಲದೆ ತಮಗೆ ವಂಚನೆಯಾಗಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ, ಅಧ್ಯಕ್ಷರು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ, ಶೋಚನೀಯ,'' ಎಂದು ಸಿಎನ್‍ಎನ್ ಆ್ಯಂಕರ್ ಜೇಕ್ ಟ್ಯಾಪರ್ ಹೇಳಿದರು.
ಟ್ರಂಪ್ ಅವರ ಸಂಪೂರ್ಣ ಭಾಷಣ ಪ್ರಸಾರ ಮಾಡಿದ ಫಾಕ್ಸ್ ಚಾನೆಲ್ ನಿರೂಪಕರು ಮಾತನಾಡಿ "ಟ್ರಂಪ್ ಅವರು ಯಾವುದೇ ನಿರ್ದಿಷ್ಟ ಅವ್ಯವಹಾರಗಳನ್ನು ಬೊಟ್ಟು ಮಾಡಿ ತೋರಿಸಿಲ್ಲವೆಂದ ಮಾತ್ರಕ್ಕೆ ಅವ್ಯವಹಾರ ನಡೆದಿಲ್ಲ ಎಂದಲ್ಲ, ಆದರೆ ಅಧ್ಯಕ್ಷರು ಮತ್ತವರ ವಕೀಲರು ಆಧಾರ ಮುಂದಿಡಬೇಕು,'' ಎಂದರು.
'ದಿ ನ್ಯೂಯಾರ್ಕ್ ಪೋಸ್ಟ್' ಕೂಡ ತನ್ನ ಶೀರ್ಷಿಕೆಯಲ್ಲಿ `ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಅಕ್ರಮದ ಕುರಿತು ತಮ್ಮ ಶ್ವೇತಭವನ ಭಾಷಣದಲ್ಲಿ ನಿರಾಧಾರ ಆರೋಪ ಮಾಡಿದ್ದಾರೆ,'' ಎಂದಿದೆ.
ಟ್ರಂಪ್ ಪ್ರಚಾರ ತಂಡವು ಚುನಾವಣಾ ಅಕಮಗಳ ಕುರಿತಂತೆ ದಾಖಲಿಸಿದ ದೂರುಗಳನ್ನು ಆಧಾರರಹಿತ ಎಂದು ಪರಿಗಣಿಸಿ ಜಾರ್ಜಿಯಾ ಮತ್ತು ಮಿಚಿಗನ್ ನ್ಯಾಯಾಲಯಗಳು ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಟ್ರಂಪ್ ಅವರ ಎದುರಾಳಿ ಜೋ ಬೈಡನ್ ಈಗಾಗಲೇ ಟ್ರಂಪ್ ಅವರಿಗಿಂತ ಬಹಳಷ್ಟು ಮುಂದಿದ್ದು, ಜಾರ್ಜಿಯಾ ಮತ್ತು ಪೆನ್ನಿಸ್ಲೇವೇನಿಯಾದಲ್ಲಿ ಸಾಕಷ್ಟು ಮತಗಳನ್ನು ಅವರು ಗಳಿಸಿದಲ್ಲಿ 270ರ ಮ್ಯಾಜಿಕ್ ಸಂಖ್ಯೆಯನ್ನು ಅವರು ತಲುಪಬಹುದಾಗಿದೆ.