×
Ad

ಚೀನಾದೊಂದಿಗೆ ದೊಡ್ಡ ಸಂಘರ್ಷದ ಸಾಧ್ಯತೆ ತಳ್ಳಿಹಾಕಲಾಗದು: ಬಿಪಿನ್ ರಾವತ್

Update: 2020-11-06 21:06 IST

ಹೊಸದಿಲ್ಲಿ, ನ.6: ಗಡಿಭಾಗದಲ್ಲಿ ನಡೆಯುತ್ತಿರುವ ಘರ್ಷಣೆ ಮತ್ತು ಅಪ್ರಚೋದಿತ ದಾಳಿಗಳು ಹೆಚ್ಚಿದರೆ ಚೀನಾದೊಂದಿಗೆ ದೊಡ್ಡ ಸಂಘರ್ಷದ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಹೇಳಿದ್ದಾರೆ.

ನಮ್ಮ ನೆರೆಹೊರೆಯ ಎರಡು ಪರಮಾಣು ಸಶಕ್ತ ದೇಶಗಳಾದ ಚೀನಾ ಮತ್ತು ಪಾಕ್ ಜತೆಗೂಡಿ ಕಾರ್ಯನಿರ್ವಹಿಸುವುದರಿಂದ ಪ್ರಾದೇಶಿಕ ಅಸ್ಥಿರತೆ ಹೆಚ್ಚುವ ಅಪಾಯವಿದೆ ಎಂದ ರಾವತ್, ಆದರೆ ಚೀನಾದೊಂದಿಗೆ ಪೂರ್ಣಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಕಡಿಮೆ ಎಂದರು. ಚೀನಾದ ಯುದ್ಧೋತ್ಸುಕ ಮನಸ್ಥಿತಿ ಮತ್ತು ಗಡಿಭಾಗದಲ್ಲಿ ಅತಿಕ್ರಮಣಗಳ ಕಾರಣದಿಂದ ಉಭಯ ದೇಶಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನತೆ ನೆಲೆಸಿದೆ. ಲಡಾಖ್ ಪ್ರಾಂತ್ಯದಲ್ಲಿ ಭಾರತೀಯ ಸೇನಾಪಡೆಯ ದೃಢ ಪ್ರತಿವರ್ತನೆಯಿಂದ ಚೀನೀ ಸೇನೆ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಾವುದೇ ಬದಲಾವಣೆಯನ್ನು ಒಪ್ಪುವುದಿಲ್ಲ ಎಂಬ ನಿಸ್ಸಂದಿಗ್ಧ ನಿಲುವು ನಮ್ಮದಾಗಿದೆ ಎಂದು ಜ. ರಾವತ್ ಹೇಳಿದ್ದಾರೆ. ನ್ಯಾಷನಲ್ ಡಿಫೆನ್ಸ್ ಕಾಲೇಜು ಹಮ್ಮಿಕೊಂಡಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಕೊರೋನ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಹಿಂಜರಿತದಿಂದಾಗಿ ಚೀನಾ ಈಗ ‘ ದೇಶದಲ್ಲಿ ದಮನಕಾರಿ ನಿಲುವು, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಆಕ್ರಮಣಕಾರಿ ನಿಲುವು’ ತಳೆಯುತ್ತಿದ್ದು ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ ಮತ್ತು ತೈವಾನ್ ಜಲಸಂಧಿಯಲ್ಲಿ ಚೀನಾದ ವರ್ತನೆ ಇದಕ್ಕೆ ಉದಾಹರಣೆಯಾಗಿದೆ. ದುರ್ಬಲ ದೇಶಗಳ ನ್ನು ಆರ್ಥಿಕವಾಗಿ ಶೋಷಿಸುವುದು, ಸೇನೆಯ ಆಧುನೀಕರಣ, ಪಾಶ್ಚಿಮಾತ್ಯ ದೇಶಗಳೊಂದಿಗಿನ ಪೈಪೋಟಿ ಹೆಚ್ಚಳ ಇತ್ಯಾದಿ ಉಪಕ್ರಮಗಳ ಮೂಲಕ ಚೀನಾ ತನ್ನ ಪ್ರಭುತ್ವದ ಹಿತಾಸಕ್ತಿಗಾಗಿ ಇನ್ನಷ್ಟು ಆಕ್ರಮಣಕಾರಿ ವರ್ತನೆ ತೋರಬಹುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News