ಜಮ್ಮುಕಾಶ್ಮೀರ: ಭದ್ರತಾ ಪಡೆಯಿಂದ ಎನ್‌ಕೌಂಟರ್; ಶಂಕಿತ ಉಗ್ರ, ನಾಗರಿಕ ಸಾವು

Update: 2020-11-06 16:34 GMT

ಶ್ರೀನಗರ, ನ. 6: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ರಾತ್ರಿಯಿಡಿ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಶಂಕಿತ ಉಗ್ರ ಹತನಾಗಿದ್ದಾನೆ, ಇನ್ನೋರ್ವ ಶರಣಾಗತನಾಗಿದ್ದಾನೆ. ಅಲ್ಲದೆ ನಾಗರಿಕರೋರ್ವರು ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

 ಶಂಕಿತ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆ ದಕ್ಷಿಣ ಕಾಶ್ಮೀರದ ಪಾಂಪೊರೆಯ ಲಾಲ್‌ಪೋರಾ ಪ್ರದೇಶವನ್ನು ಗುರುವಾರ ರಾತ್ರಿ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತು. ಶುಕ್ರವಾರ ಬೆಳಗ್ಗೆ ಶಂಕಿತ ಉಗ್ರರು ಗುಂಡು ಹಾರಿಸಲು ಆರಂಭಿಸಿದರು. ಇದಕ್ಕೆ ಭದ್ರತಾ ಪಡೆ ಸೂಕ್ತ ಪ್ರತ್ಯುತ್ತರ ನೀಡಿತು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಶಂಕಿತ ಉಗ್ರ ಹತನಾದ ಎಂದು ಅವರು ತಿಳಿಸಿದ್ದಾರೆ.

ಈ ಗುಂಡಿನ ಚಕಮಕಿ ಸಂದರ್ಭ ಶಂಕಿತ ಉಗ್ರರು ಹಾರಿಸಿದ ಗುಂಡು ತಗುಲಿ ಇಬ್ಬರು ನಾಗರಿಕರು ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರಲ್ಲಿ ಓರ್ವ ಶುಕ್ರವಾರ ಬೆಳಗ್ಗೆ ಮೃತಪಟ್ಟ ಎಂದು ಅವರು ಹೇಳಿದ್ದಾರೆ.

ಹತ ಉಗ್ರನ ಗುರುತು ಹಾಗೂ ಆತನ ಸಂಘಟನೆಯ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಶೋಧ ಕಾರ್ಯಾಚರಣೆ ಸಂದರ್ಭ ಸ್ಥಳೀಯ ಇನ್ನೋರ್ವ ಶಂಕಿತ ಉಗ್ರ ಭದ್ರತಾ ಪಡೆಯ ಮುಂದೆ ಶರಣಾಗತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News