×
Ad

ಬ್ಲೂಸ್ಟಾರ್ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ಅಮೂಲ್ಯ ವಸ್ತುಗಳ ಪಟ್ಟಿ ನೀಡದಂತೆ ತಡೆಯಲು ಕೇಂದ್ರಕ್ಕೆ ಸಿಐಸಿ ಒಪ್ಪಿಗೆ

Update: 2020-11-06 22:18 IST

ಹೊಸದಿಲ್ಲಿ, ನ. 6: ಸೇನಾ ಸಿಬ್ಬಂದಿ ಸಹಿತ 576 ಮಂದಿ ಸಾವನ್ನಪ್ಪಿದ 1984ರ ಪಂಜಾಬ್‌ನ ಗೋಲ್ಡನ್ ಟೆಂಪಲ್ ಕಾರ್ಯಾಚರಣೆ ಸಂದರ್ಭ ಕೇಂದ್ರ ಸಂಸ್ಥೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಅಮೂಲ್ಯಸೊತ್ತುಗಳ ಪಟ್ಟಿ ನೀಡುವುದನ್ನು ತಡೆ ಹಿಡಿಯಲು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಕೇಂದ್ರ ಸರಕಾರಕ್ಕೆ ಅನುಮತಿ ನೀಡಿದೆ.

  ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿದ್ದ ಉಗ್ರರನ್ನು ಹೊರಗೆ ಅಟ್ಟಲು ಸೇನೆ ಆಯೋಜಿಸಿದ್ದ ಕಾರ್ಯಾಚರಣೆ ಸಂದರ್ಭ ಮೃತಪಟ್ಟ ಎಲ್ಲ ವ್ಯಕ್ತಿಗಳ, ಈ ಸಂದರ್ಭ ವಶಪಡಿಸಿಕೊಳ್ಳಲಾದ ಸೊತ್ತುಗಳ ಪಟ್ಟಿ, ಅದರ ಪ್ರಸಕ್ತ ಸ್ಥಿತಿಗತಿ, ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡುವಂತೆ ಆರ್‌ಟಿಐ ಕಾರ್ಯಕರ್ತ ಗುರ್ವಿಂದರ್ ಸಿಂಗ್ ಚಡ್ಡಾ ಕೇಂದ್ರದ ಗೃಹ ಸಚಿವಾಲಯದಿಂದ ಕೋರಿದ್ದರು.

  ಪಟ್ಟಿ ಹಾಗೂ ವಶಪಡಿಸಿಕೊಳ್ಳಲಾದ ವಸ್ತುಗಳ ನಿರ್ದಿಷ್ಟ ವಿವರ ನೀಡದ ಸಚಿವಾಲಯ, ಸುಮಾರು 4,000 ದಾಖಲೆಗಳು/ ಪುಸ್ತಕಗಳು/ಕಡತಗಳು/ ಹಾಗೂ ಚಿನ್ನ/ಚಿನ್ನದ ಆಭರಣ, ಬೆಳ್ಳಿ/ ಬೆಳ್ಳಿಯ ಆಭರಣ, ಅಮೂಲ್ಯ ಕಲ್ಲುಗಳು, ನೋಟುಗಳು ಹಾಗೂ ನಾಣ್ಯಗಳನ್ನು ಬ್ಲೂಸ್ಟಾರ್ ಕಾರ್ಯಾಚರಣೆ ಸಂದರ್ಭ ಕೇಂದ್ರ ಸಂಸ್ಥೆ ವಶಪಡಿಸಿಕೊಂಡಿದೆ. ವಸ್ತುಗಳು ಹಾಗೂ ದಾಖಲೆಗಳನ್ನು ಎಸ್‌ಜಿಪಿಸಿ ಅಥವಾ ಪಂಜಾಬ್ ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಿದೆ.

ಈ ಕಚೇರಿಯಲ್ಲಿ ಲಭ್ಯವಿರುವ ದಾಖಲೆ ಪ್ರಕಾರ, 493 ಭಯೋತ್ಪಾದಕರು/ ನಾಗರಿಕರು ಹಾಗೂ 83 ಸೇನಾ ಅಧಿಕಾರಿಗಳು 1984ರ ಜೂನ್‌ನಲ್ಲಿ ಗೋಲ್ಡನ್ ಟೆಂಪಲ್ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ವಶಪಡಿಸಿಕೊಳ್ಳಲಾದ ಸೊತ್ತುಗಳ ಕುರಿತು ನಿರ್ದಿಷ್ಟ ಮಾಹಿತಿ ನೀಡಲು ನಿರಾಕರಿಸಿದ ಬಗ್ಗೆ ಅಸಮಾಧಾನಗೊಂಡ ಚಡ್ಡಾ ಅವರು ಮಾಹಿತಿ ನೀಡಲು ನಿರಾಕರಿಸಿದ ಅಧಿಕಾರಿ ವಿರುದ್ಧ ಸಚಿವಾಲಯಕ್ಕೆ ಮೊದಲ ಮೇಲ್ಮನವಿ ಸಲ್ಲಿಸಿದ್ದರು.

ಕೇಂದ್ರ ಮಾಹಿತಿ ಆಯೋಗಕ್ಕೆ ಸಲ್ಲಿಸಿದ ಎರಡನೇ ಮೇಲ್ಮನವಿಯಲ್ಲಿ ಚಡ್ಡಾ, ಆಪರೇಶನ್ ಬ್ಲೂಸ್ಟಾರ್‌ನ ದಾಖಲೆಗಳಿಗೆ ಸಂಬಂಧಿಸಿದ ಅಂಶಗಳು ಹಾಗೂ ಈ ಕಾರ್ಯಾಚರಣೆ ಸಂದರ್ಭ ವಶಪಡಿಸಿಕೊಳ್ಳಲಾದ ಸೊತ್ತುಗಳ ಬಗ್ಗೆ ತೃಪ್ತಿಕರ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News