ಉ.ಪ್ರ.ದಲ್ಲಿ ಮತ್ತೆ ಕಂಡು ಬಂದ ಸಿಎಎ ಪ್ರತಿಭಟನಾಕಾರರ ಪೋಸ್ಟರ್

Update: 2020-11-06 18:17 GMT
ಫೈಲ್ ಚಿತ್ರ

 ಹೊಸದಿಲ್ಲಿ, ನ. 6: ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾದ ಹಾಗೂ ಪರಾರಿಯಾದ 12 ಮಂದಿಯ ಭಾವಚಿತ್ರವುಳ್ಳ ಪೋಸ್ಟರ್ ಲಕ್ನೋದಲ್ಲಿ ಮತ್ತೆ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ದಾಂಧಲೆಯಿಂದ ನಷ್ಟ ಉಂಟಾಗಿದೆ ಎಂದು ಪ್ರತಿಪಾದಿಸಿ ಕೆಲವು ಪ್ರತಿಭಟನಾಕಾರರ ಭಾವಚಿತ್ರಗಳಿದ್ದ ಹೋರ್ಡಿಂಗ್ ಅನ್ನು ಸ್ಥಳೀಯಾಡಳಿತ ಹಾಕಿ ವಿವಾದ ಉಂಟಾದ ತಿಂಗಳುಗಳ ಬಳಿಕ ಈ ಪೋಸ್ಟರ್‌ಗಳು ಕಂಡು ಬಂದಿವೆ.

ಇಂತಹ ಹೋರ್ಡಿಂಗ್‌ಗಳನ್ನು ತೆಗೆಯುವಂತೆ ಈ ವರ್ಷ ಆರಂಭದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ಲಕ್ನೋ ಆಡಳಿತಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಆದರೆ, ಈ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯ ವಿಚಾರಣೆಗೆ ಬಾಕಿ ಇದೆ.

ಪೌರತ್ವ ವಿರೋಧಿ ಪ್ರತಿಭಟನಾಕಾರರ ವೈಯುಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ಅವರ ಸುರಕ್ಷತೆಗೆ ಗಂಭೀರ ಅಪಾಯ ಇದೆ ಎಂದು ಸಾಮಾಜಿಕ ಹೋರಾಟಗಾರರು ಹೇಳಿದ್ದರು.

ರಾಜ್ಯದ ಕ್ರಮ ಸಂವಿಧಾನದ ಕಲಂ 14ರ ಉಲ್ಲಂಘನೆ ಹಾಗೂ ಜನರ ಖಾಸಗಿತನದಲ್ಲಿ ಅನಗತ್ಯ ಹಸ್ತಕ್ಷೇಪ ಎಂದು ನ್ಯಾಯಪೀಠ ಹೇಳಿತ್ತು.

ಈ ಪ್ರತಿಭಟನಾಕಾರರ ಬಗ್ಗೆ ಮಾಹಿತಿ ನೀಡಿದರೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಈ ಎರಡು ಹೊಸ ಪೋಸ್ಟರ್‌ಗಳಲ್ಲಿ ಕೂಡ ಹೇಳಲಾಗಿದೆ. ಉತ್ತರಪ್ರದೇಶದ ರಾಜಧಾನಿಯ ಸಾರ್ವಜನಿಕ ಪ್ರದೇಶದಲ್ಲಿ ಭಾವಚಿತ್ರದೊಂದಿಗೆ ಈ ಪೋಸ್ಟರ್ ಹಾಕಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 ಒಂದು ಪೋಸ್ಟರ್ ಗ್ಯಾಂಗ್‌ಸ್ಟರ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದ ಹಾಗೂ ಪರಾರಿಯಾದವರು ಎಂದು ಘೋಷಿಸಲಾದ 8 ಮಂದಿಯ ಫೋಟೊ ಹಾಗೂ ವಿಳಾಸವನ್ನು ಹೊಂದಿದೆ. ಇನ್ನೊಂದು ಪೋಸ್ಟರ್‌ನಲ್ಲಿ ಗ್ಯಾಂಗಸ್ಟರ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದ, ಆದರೆ, ಪರಾರಿಯಾಗಿರುವ ವ್ಯಕ್ತಿಗಳ ಭಾವಚಿತ್ರಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಲಕ್ನೋದಲ್ಲಿ ಡಿಸೆಂಬರ್ 19ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ಎಲ್ಲರೂ ಪಾಲ್ಗೊಂಡಿದ್ದಾರೆ. ಅಲ್ಲದೆ, ಓರ್ವ ವ್ಯಕ್ತಿ ಸಾವನ್ನಪ್ಪಲು ಹಾಗೂ ಸಾರ್ವಜನಿಕ ಸೊತ್ತಿಗೆ ಹಾನಿ ಉಂಟಾಗಲು ಕಾರಣವಾದ ಹಿಂಸಾಚಾರಕ್ಕೆ ಉತ್ತೇಜನ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News