ಕುಲದೀಪ್ ಸೆಂಗಾರ್‌ನ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸಿಬಿಐಗೆ ಹೈಕೋರ್ಟ್ ಸೂಚನೆ
ಹೊಸದಿಲ್ಲ್ಲಿ, ನ. 6: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ನಿರ್ಣಯಿಸಿರುವುದು ಹಾಗೂ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಉತ್ತರಪ್ರದೇಶದ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ಸಿಬಿಐಗೆ ಸೂಚಿಸಿದೆ.
ನ್ಯಾಯಮೂರ್ತಿ ವಿಭು ಬಖ್ರು ಅವರು ಸಿಬಿಐಗೆ ನೋಟಿಸು ಜಾರಿ ಮಾಡಿದರು ಹಾಗೂ ಮೇಲ್ಮನವಿ ಬಾಕಿ ಇರುವ ವರೆಗೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸೆಂಗಾರ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದರು.
ಮನವಿಯ ಮುಂದಿನ ವಿಚಾರಣೆಯನ್ನು ಉಚ್ಚ ನ್ಯಾಯಾಲಯ ನವೆಂಬರ್ 10ಕ್ಕೆ ನಿಗದಿಪಡಿಸಿದೆ.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಸೆಂಗಾರ್‌ನ ಅಣತಿಯಂತೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದರು. 2018ರ ಏಪ್ರಿಲ್ 9ರಂದು ಅವರ ಕಸ್ಟಡಿ ಸಾವು ಸಂಭವಿಸಿತ್ತು.
ಈ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಮಾರ್ಚ್ 4ರಂದು ಸೆಂಗಾರ್, ಆತನ ಸಹೋದರ ಹಾಗೂ ಇತರ ಐದು ಮಂದಿಯನ್ನು ದೋಷಿ ಎಂದು ನಿರ್ಣಯಿಸಿತ್ತು. ಮಾರ್ಚ್ 13ರಂದು ಎಲ್ಲರಿಗೂ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅಲ್ಲದೆ ಸೆಂಗಾರ್‌ಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.