ಅಸಾರಾಮ್ ಕುರಿತ ಪುಸ್ತಕ ಪ್ರಕಟಣೆಗೆ ತಡೆ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2020-11-06 18:01 GMT

 ಹೊಸದಿಲ್ಲಿ, ನ.6: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಧಾರ್ಮಿಕ ಮುಖಂಡ ಅಸಾರಾಮ್ ಬಾಪು ಕುರಿತ ಪುಸ್ತಕದ ಪ್ರಕಟಣೆಗೆ ಅನುಮತಿ ನೀಡಿದ್ದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

 ‘ಗನ್ನಿಂಗ್ ಫಾರ್ ದಿ ಗಾಡ್‌ಮ್ಯಾನ್’ ಎಂಬ ಹೆಸರಿನ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಪ್ರಕಾಶಕ ಸಂಸ್ಥೆ ಪ್ರಕಟಿಸಲು ಅನುಮತಿ ಕೋರಿತ್ತು. ಜಿಲ್ಲಾ ನ್ಯಾಯಾಲಯ ಅನುಮತಿ ನಿರಾಕರಿಸಿದ ಬಳಿಕ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಪುಸ್ತಕ ಪ್ರಕಟಿಸಿ ಬಿಡುಗಡೆಗೊಳಿಸಲು ಅನುಮತಿ ನೀಡಿತ್ತು.

    ಈ ಪುಸ್ತಕ ವಾಸ್ತವಾಂಶವನ್ನು ಹೊಂದಿಲ್ಲ. ಕೆಲವರ ಬಗ್ಗೆ ಕಪೋಲ ಕಲ್ಪಿತ ಮಾಹಿತಿ ನೀಡಲಾಗಿದೆ. ಆದ್ದರಿಂದ ದಿಲ್ಲಿ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಬೇಕು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಿಲ್ಪಿ ಎಂಬ ವ್ಯಕ್ತಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಪುಸ್ತಕದ ಆರಂಭದಲ್ಲೇ ಘಟನೆಗಳನ್ನು ನಾಟಕೀಯಗೊಳಿಸಿರುವುದನ್ನು ಒಪ್ಪಿಕೊಳ್ಳಲಾಗಿದೆ. ಪುಸ್ತಕದ ಒಂದು ಅಧ್ಯಾಯದಲ್ಲಿ ಶಿಲ್ಪಿ ಎಂಬಾತ ಅಸಾರಾಮ್ ಗೆ ಮಹಿಳೆಯರನ್ನು ಪೂರೈಸುವ ಕೆಲಸ ಮಾಡುತ್ತಿದ್ದ ಎಂದು ಉಲ್ಲೇಖಿಸಿದ್ದು ಇದು ತನ್ನ ಘನತೆಗೆ ಕುಂದುಂಟು ಮಾಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದೇ ಆಕ್ಷೇಪವನ್ನು ಹೈಕೋರ್ಟ್‌ನಲ್ಲಿ ಎತ್ತಿದ್ದೀರಾ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತು. ಹೌದು, ಆದರೆ ಅವರು ಅದನ್ನು ಪರಿಗಣಿಸಿಲ್ಲ ಎಂದು ಅರ್ಜಿದಾರರು ಉತ್ತರಿಸಿದಾಗ, ಹೈಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸುವಂತೆ ತಿಳಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.

ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಅಸಾರಾಮ್ ಈಗ ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News