ಸುಪ್ರೀಂಕೋರ್ಟ್ ಒಪ್ಪಿದರೆ ಹೊಸದಾಗಿ ಎನ್‌ಆರ್‌ಸಿ ಆರಂಭ: ಅಸ್ಸಾಂ ಸಚಿವ
ಗುವಾಹಟಿ, ನ.6: ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿರುವ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್(ಎನ್‌ಆರ್‌ಸಿ) ಮೂಲತಃ ತಪ್ಪಾಗಿದ್ದು, ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ವಿಧಾನಸಭೆ ಚುನಾವಣೆಯ ಬಳಿಕ ಹೊಸ ಉಪಕ್ರಮ ನಡೆಸಲಾಗುವುದು ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.
‘ಆಧುನಿಕ ಮುಘಲರು’ ಅಸ್ಸಾಂನೆಲ್ಲೆಡೆ ಪ್ರವೇಶಿಸಿದ್ದಾರೆ. ಇದನ್ನು ತಡೆಯಲು ಸುದೀರ್ಘ ರಾಜಕೀಯ ಹೋರಾಟದ ಅಗತ್ಯವಿದೆ. ಅಸ್ಸಾಂನಿಂದ ಆಧುನಿಕ ಮುಘಲರನ್ನು ಹೊರ ಹಾಕಲು ಕನಿಷ್ಠ 5 ವರ್ಷದ ರಾಜಕೀಯ ಹೋರಾಟ ನಡೆಸಬೇಕಾಗಿದೆ . ಎನ್‌ಆರ್‌ಸಿಯ ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೇಲ ಎನ್‌ಆರ್‌ಸಿಯಲ್ಲಿ ತಪ್ಪು ನುಸುಳಲು ಮೂಲ ಕಾರಣ. ಎನ್‌ಆರ್‌ಸಿಯ ಶೇ 15ರಷ್ಟು ಪರಿಷ್ಕರಣೆಗೆ ನ್ಯಾಯಾಲಯದ ಅನುಮತಿ ಕೋರುತ್ತೇವೆ ಎಂದವರು ಹೇಳಿದ್ದಾರೆ.
ಹಜೇಲ ಸಿದ್ಧಪಡಿಸಿರುವ ಎನ್‌ಆರ್‌ಸಿಯಲ್ಲಿ ಆರ್ಥಿಕ ಅಸಂಗತತೆಯ ಬಗ್ಗೆ ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. ಅವರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಧುಬ್ರಿ, ಬರ್ಪೇಟ ಮುಂತಾದ ಕೆಲವು ಜಿಲ್ಲೆಗಳಲ್ಲಿ ಜನರು ತಮ್ಮದೇ ಆದ ಎನ್‌ಆರ್‌ಸಿ ರಚಿಸಿಕೊಂಡಿರುವುದರಿಂದ ದತ್ತಸಂಚಯದಲ್ಲೇ ತಪ್ಪಾಗಿದೆ. ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ನಡೆದಿದ್ದರೂ ಹಜೇಲ ಇದರ ಕೆಲವು ಅಂಶಗಳನ್ನು ತಿರುಚಿದ್ದು ಈಗ ಕಳ್ಳರು ಪೊಲೀಸ್ ಆದಂತಾಗಿದೆ ಎಂದು ಹಿಮಂತ ಬಿಸ್ವ ಶರ್ಮ ಹೇಳಿರುವುದಾಗಿ ವರದಿ ತಿಳಿಸಿದೆ.
ಕಳೆದ ವರ್ಷದ ಆಗಸ್ಟ್ 31ರಂದು ಪ್ರಕಟವಾದ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ 19 ಲಕ್ಷಕ್ಕೂ ಅಧಿಕ ಜನರ ಹೆಸರನ್ನು ಕೈಬಿಡಲಾಗಿದೆ. ಇದನ್ನು ಪ್ರಶ್ನಿಸಿ ಹಲವು ಮಂದಿ ಮೇಲ್ಮನವಿ ಸಲ್ಲಿಸಿದ್ದಾರೆ. ಎನ್‌ಆರ್‌ಸಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿರುವ ಹೆಸರನ್ನು ಅಳಿಸಿ ಹಾಕುವಂತೆ ಕಳೆದ ತಿಂಗಳು ಅಸ್ಸಾಂ ಎನ್‌ಆರ್‌ಸಿ ಸಂಯೋಜಕರು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದರು.