2021ರ ಹಜ್ ಯಾತ್ರೆಗೆ ಮಾರ್ಗಸೂಚಿ ಪ್ರಕಟ: ಯಾತ್ರಿಗಳಿಗೆ 65 ವರ್ಷಗಳ ವಯೋಮಿತಿ

Update: 2020-11-07 15:06 GMT

ಹೊಸದಿಲ್ಲಿ,ನ.7: ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು 2021ರ ಹಜ್ ಯಾತ್ರೆಗಾಗಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಶನಿವಾರ ಮುಂಬೈನ ಹಜ್ ಭವನದಲ್ಲಿ ಬಿಡುಗಡೆಗೊಳಿಸಿದರು. ಇತರ ಬದಲಾವಣೆಗಳೊಂದಿಗೆ ಯಾತ್ರಿಗಳ ವಯಸ್ಸನ್ನು 65 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2021ರಲ್ಲಿ ಹಜ್ ಯಾತ್ರೆ ನಡೆಯುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸೌದಿ ಅರೇಬಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

 ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಹಜ್ ಯಾತ್ರೆಗೆ ನಿರ್ಗಮನ ಕೇಂದ್ರಗಳನ್ನು 21ರಿಂದ 10ಕ್ಕೆ ತಗ್ಗಿಸಲಾಗಿದೆ. ಅಹ್ಮದಾಬಾದ್,ಬೆಂಗಳೂರು, ಕೊಚ್ಚಿ, ದಿಲ್ಲಿ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಕ್ನೋ,ಮುಂಬೈ ಮತ್ತು ಶ್ರೀನಗರ ಇವುಗಳಲ್ಲಿ ಸೇರಿವೆ. ಹಿರಿಯ ನಾಗರಿಕರ ಮೇಲೆ ಕೊರೋನ ವೈರಸ್ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಯಾತ್ರೆಗೆ 18 ವರ್ಷಗಳಿಂದ 65 ವರ್ಷಗಳವರೆಗೆ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ.

 ಹಜ್‌ಗೆ ತೆರಳುವ ಯಾತ್ರಿಗಳು ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನಿರ್ಗಮನಕ್ಕೆ 72 ಗಂಟೆಗಳ ಮೊದಲು ಅಂಗೀಕೃತ ಪ್ರಯೋಗಾಳಯದಲ್ಲಿ ಪರೀಕ್ಷೆಯು ನಡೆದಿರಬೇಕು.

ಹಜ್ ಯಾತ್ರಿಗಳ ಮೊದಲ ತಂಡವು 2021,ಜೂ.26ರಂದು ಮತ್ತು ಕೊನೆಯ ತಂಡವು 2021,ಜು.13ರಂದು ಸೌದಿಗೆ ನಿರ್ಗಮಿಸುವ ನಿರೀಕ್ಷೆಗಳಿವೆ. 2021,ಆ.14ರಿಂದ ಮರುಪ್ರಯಾಣದ ಹಂತ ಆರಂಭಗೊಳ್ಳಲಿದೆ.

2021ರ ಹಜ್ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು. ಯಾತ್ರಿಗಳ ದೈಹಿಕ ಕ್ಷಮತೆ, ವಸತಿ, ವಾಸ್ತವ್ಯದ ಅವಧಿ, ಸಾರಿಗೆ ಮತ್ತು ಆರೋಗ್ಯ ಕುರಿತಂತೆ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲಾಗುವುದು ಎಂದು ನಕ್ವಿ ತಿಳಿಸಿದರು.

2021 ಮೇ 15-16ರಂದು ಯಾತ್ರಿಗಳಿಗೆ ಲಸಿಕೆ ಹಾಕಲಾಗುವುದು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆಯಾದರೂ ಯಾವ ಲಸಿಕೆಗಳನ್ನು ಬಳಸಲಾಗುವುದು ಎನ್ನುವುದನ್ನು ಅದು ನಿರ್ದಿಷ್ಟವಾಗಿ ತಿಳಿಸಿಲ್ಲ.

 ‘ಮಹರಮ್ (ಪುರುಷ ಸಹವರ್ತಿ)’ಇಲ್ಲದೆ ಹಜ್ ಯಾತ್ರೆಯನ್ನು ಕೈಗೊಳ್ಳುವ ಮಹಿಳೆಯರೂ ಅರ್ಜಿಗಳನ್ನು ಸಲ್ಲಿಬಹುದು. ಈ ವಿಭಾಗದಡಿ 2020ರಲ್ಲಿ 2,300ಕ್ಕೂ ಅಧಿಕ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದರು.

2021ರ ಹಜ್ ಯಾತ್ರೆಗೆ ಅರ್ಜಿಗಳ ಸಲ್ಲಿಕೆಗೆ 2020,ಡಿ.10 ಕೊನೆಯ ದಿನಾಂಕವಾಗಿದ್ದು,ಆನ್‌ಲೈನ್,ಆಫ್‌ಲೈನ್ ಮತ್ತು ಸರಕಾರದ ಹಜ್ ಮೊಬೈಲ್ ಆ್ಯಪ್ ಮೂಲಕ ಅರ್ಜಿಗಳನ್ನು ಕಳುಹಿಸಬಹುದು.

ಕೊರೋನ ವೈರಸ್‌ನಿಂದಾಗಿ 2020ರ ಹಜ್ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಯಾತ್ರೆಗಾಗಿ 2.13 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಯಾತ್ರೆಯನ್ನು ರದ್ದುಗೊಳಿಸಿದ ಬಳಿಕ ಸರಕಾರವು ಸಂಪೂರ್ಣ ಶುಲ್ಕ ಮರುಪಾವತಿಯನ್ನು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News