ಕರ್ತಾರಪುರ ಗುರುದ್ವಾರಾ ಆಡಳಿತ ವರ್ಗಾವಣೆ: ಪಾಕಿಸ್ತಾನಕ್ಕೆ ಪ್ರತಿಭಟನೆ ಸಲ್ಲಿಸಿದ ಭಾರತ
ಹೊಸದಿಲ್ಲಿ,ನ.7: ಪಾಕಿಸ್ತಾನ ರಾಯಭಾರಿ ಕಚೇರಿಯ ಚಾರ್ಜ್ ಡಿ ಅಫೇರ್ಸ್ (ಉಪ ರಾಯಭಾರಿ) ಹಸನ್ ಖಾನ್ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ)ವು ಕರ್ತಾರಪುರ ಗುರುದ್ವಾರಾದ ಆಡಳಿತವನ್ನು ಸಿಖ್ ಸಮಿತಿಯಿಂದ ಪ್ರತ್ಯೇಕ ಟ್ರಸ್ಟ್‌ಗೆ ವರ್ಗಾಯಿಸುವ ಪಾಕ್ ನಿರ್ಧಾರದ ಕುರಿತು ತನ್ನ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತು.
ಪಾಕಿಸ್ತಾನದ ನಿರ್ಧಾರವು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಖಾನ್ ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಎಂಇಎ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಹೇಳಿದರು.
ಗುರುದ್ವಾರಾದ ಆಡಳಿತ ಮತ್ತು ನಿರ್ವಹಣೆಯನ್ನು ಪಾಕಿಸ್ತಾನ ಸಿಖ್ ಗುರುದ್ವಾರಾ ಪ್ರಬಂಧಕ ಸಮಿತಿಯಿಂದ ಸಿಕ್ಖೇತರ ಸಂಸ್ಥೆಯಾದ ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‌ನ ಆಡಳಿತಾತ್ಮಕ ನಿಯಂತ್ರಣಕ್ಕೆ ವರ್ಗಾವಣೆಗೊಳಿಸುವ ಪಾಕ್ ನಿರ್ಧಾರಕ್ಕೆ ಎಂಇಎ ಗುರುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
ಪಾಕಿಸ್ತಾನದ ಏಕಪಕ್ಷೀಯ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ ಮತ್ತು ಕರ್ತಾರಪುರ ಸಾಹಿಬ್ ಕಾರಿಡಾರ್ ಉಪಕ್ರಮಕ್ಕೆ ಮತ್ತು ಪ್ರಮುಖವಾಗಿ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಶ್ರೀವಾಸ್ತವ ತಿಳಿಸಿದರು.