ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗುಪ್ಕರ್ ಮೈತ್ರಿ ಕೂಟ ಸ್ಪರ್ಧೆ

Update: 2020-11-07 17:27 GMT

ಶ್ರೀನಗರ, ನ. 7: ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ಒಕ್ಕೂಟ ‘ಪೀಪಲ್ಸ್ ಅಲೆಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್’ (ಪಿಎಜಿಡಿ) ಶನಿವಾರ ಘೋಷಿಸಿದೆ. ‘‘ಮುಂಬರುವ ಡಿಡಿಸಿ ಚುನಾವಣೆಯಲ್ಲಿ ಸಂಘಟಿತವಾಗಿ ಸ್ಪರ್ಧಿಸಲಾಗುವುದು ಎಂದು ಪಿಎಜಿಡಿ ಸರ್ವಾನುಮತದಿಂದ ನಿರ್ಧರಿಸಿದೆ. ಎಲ್ಲ ಅಂಗ ಪಕ್ಷಗಳು ಪಾಲ್ಗೊಂಡ ಸಭೆಯಲ್ಲಿ ಹಠಾತ್ ಡಿಡಿಸಿ ಚುನಾವಣೆಯ ಹೊರತಾಗಿಯೂ ಪ್ರಜಾಪ್ರಭುತ್ವದ ಪವಿತ್ರ ಅವಕಾಶವನ್ನು ವಿಭಜನೀಯ ಶಕ್ತಿಗಳು ಆಕ್ರಮಿಸದಿರಲು ಈ ನಿರ್ಧಾರ ತೆಗೆದುಕೊಳ್ಳಲಾಯಿತು’’ ಎಂದು ಜಮ್ಮು ವಲಯದಲ್ಲಿ ಆಯೋಜಿಸಿದ್ದ ಸಭೆಯ ಬಳಿಕ ಒಕ್ಕೂಟದ ಹೇಳಿಕೆ ತಿಳಿಸಿದೆ.

‘‘ಕಳೆದ ಕೆಲವು ದಿನಗಳಿಂದ ಶ್ರೀನಗರ ಹಾಗೂ ಜಮ್ಮುವಿನಿಲ್ಲಿ ನಾವು ಹಲವು ನಿಯೋಗಗಳನ್ನು ಭೇಟಿಯಾಗಿದ್ದೇವೆ. ವಿವಿಧ ನಿಯೋಗ ಗಳೊಂದಿಗೆ ನಮ್ಮ ಸಂವಹನದ ಫಲಿತಾಂಶವೇ ಚುನಾವಣೆಯಲ್ಲಿ ಪಾಲ್ಗೊಳ್ಳುವ ನಮ್ಮ ನಿರ್ಧಾರ’’ ಎಂದು ಮಾಜಿ ಶಾಸಕ ಹಾಗೂ ಸಿಪಿಎಂನ ಹಿರಿಯ ನಾಯಕ ಎಂ.ವೈ. ತರಿಗಮಿ ಹೇಳಿದ್ದಾರೆ. ನಾವು ಚುನಾವಣೆಯಲ್ಲಿ ಸಂಘಟಿತರಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದು ತರಿಗಮಿ ತಿಳಿಸಿದ್ದಾರೆ. ಪಿಎಜಿಡಿ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ), ಸಿಪಿಎಂ, ಸಿಪಿಐ, ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್, ಅವಾಮಿ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪೀಪಲ್ಸ್ ಮೂವ್‌ಮೆಂಟ್ ಪಿಎಜಿಡಿಯಲ್ಲಿ ಒಳಗೊಂಡಿದೆ. ಅಕ್ಟೋಬರ್‌ನಲ್ಲಿ ಕೇಂದ್ರ ಸರಕಾರ 1989ರ ಜಮ್ಮು ಹಾಗೂ ಕಾಶ್ಮ್ಜೀರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ನೂತನ ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಜಿಲ್ಲೆಗಳಲ್ಲಿ ಡಿಡಿಸಿಯನ್ನು ಸ್ಥಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News