ತಲೋಜ ಸೆಂಟ್ರಲ್ ಜೈಲಿಗೆ ಅರ್ನಬ್ ಗೋಸ್ವಾಮಿ ಸ್ಥಳಾಂತರ

Update: 2020-11-08 09:44 GMT

ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಇತ್ತೀಚೆಗೆ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಇಂದು ನವಮುಂಬೈನಲ್ಲಿರುವ ತಲೋಜ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.

ವರ್ಲಿಯಲ್ಲಿರುವ ತನ್ನ ಮನೆಯಿಂದ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟ ಬಳಿಕ ಗೋಸ್ವಾಮಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿತ್ತು. ಅವರನ್ನು ಅಲಿಬಾಗ್ ಮುನ್ಸಿಪಲ್ ಸ್ಕೂಲ್‌ನಲ್ಲಿ ಕ್ವಾರಂಟೈನ್ ಸೆಂಟರ್‌ನಲ್ಲಿ ಇಡಲಾಗಿತ್ತು.

ಗೋಸ್ವಾಮಿ ಅವರು ಬೇರೊಬ್ಬರ ಮೊಬೈಲ್‌ನ್ನು ಬಳಸುತ್ತಿದ್ದರು. ನ್ಯಾಯಾಂಗ ಕಸ್ಟಡಿಯಲ್ಲಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು ಎಂದು ರಾಯಗಢ ಕ್ರೈಮ್ ಬ್ರಾಂಚ್ ತನಿಖಾಧಿಕಾರಿ ಜಮೀಲ್ ಶೇಖ್ ತಿಳಿಸಿದ್ದಾರೆ.

ಗೋಸ್ವಾಮಿಗೆ ಮೊಬೈಲ್ ಬಳಕೆ ಹೇಗೆ ಸಾಧ್ಯವಾಯಿತು. ಕ್ವಾರಂಟೈನ್ ಕೇಂದ್ರದಲ್ಲಿ ಅವರಿಗೆ ಮೊಬೈಲ್ ಒದಗಿಸಿದ್ದು ಯಾರು ಎಂದು ಪ್ರಕರಣದ ತನಿಖಾಧಿಕಾರಿಯಾಗಿ ತನಿಖಾ ವರದಿಯನ್ನು ಕೋರಿ ನಾನು ಅಲಿಬಾಗ್ ಜೈಲು ಅಧೀಕ್ಷಕರಿಗೆ ಪತ್ರ ಬರದಿದ್ದೇನೆ. ಆನಂತರ ರವಿವಾರ ಬೆಳಗ್ಗೆ ಗೋಸ್ವಾಮಿ ಅವರನ್ನು ನಾವು ತಲೋಜ ಜೈಲಿಗೆ ಸ್ಥಳಾಂತರ ಮಾಡಿದ್ದೇವೆ ಎಂದು ಶೇಖ್ ಆಂಗ್ಲಪತ್ರಿಕೆಗೆ ತಿಳಿಸಿದ್ದಾರೆ.

ರವಿವಾರ ಬೆಳಗ್ಗೆ ರಿಪಬ್ಲಿಕ್ ಟಿವಿ ಹಂಚಿಕೊಂಡಿರುವ ವೀಡಿಯೊದಲ್ಲಿ ಗೋಸ್ವಾಮಿ ಪೊಲೀಸ್ ವ್ಯಾನ್‌ನಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದು ಕಂಡುಬಂದಿದೆ.

"ನನಗೆ ಜೀವ ಬೆದರಿಕೆ ಇದೆ. ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ. ಇಂದು ಬೆಳಗ್ಗೆ ನನ್ನನ್ನು ತಳ್ಳಲಾಯಿತು. ಹಲ್ಲೆ ಮಾಡಲಾಗಿದೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ದೇಶದ ಜನರಿಗೆ ತಿಳಿಸಿ" ಎಂದು ಗೋಸ್ವಾಮಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News