8ನೇ ಸುತ್ತಿನಲ್ಲಿ ನೇರ, ರಚನಾತ್ಮಕ ಮಾತುಕತೆ: ಭಾರತ-ಚೀನಾ ಸೇನೆಗಳ ಹೇಳಿಕೆ

Update: 2020-11-08 16:54 GMT

ಹೊಸದಿಲ್ಲಿ, ನ.9: ಲಡಾಖ್‌ನಲ್ಲಿ ಭಾರತ-ಚೀನಾ ಮಧ್ಯೆ ನೆಲೆಸಿರುವ ಬಿಕ್ಕಟ್ಟನ್ನು ಪರಿಹರಿಸಲು ಉಭಯ ಸೇನೆಗಳ ಮಧ್ಯೆ ರವಿವಾರ ನಡೆದ ಮಾತುಕತೆ ನೇರ, ನಿರ್ಭೀತ ಮತ್ತು ರಚನಾತ್ಮಕವಾಗಿತ್ತು. ಆದರೆ ಸೇನೆಯ ವಾಪಸಾತಿ ವಿಷಯದಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಜಂಟಿ ಹೇಳಿಕೆ ತಿಳಿಸಿದೆ.

     ಉಭಯ ದೇಶಗಳ ಮುಖಂಡರು ಸಹಮತದಿಂದ ರೂಪಿಸಿದ್ದ ಉಪಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಲು ಮತ್ತು ಮುಂಚೂಣಿ ಪಡೆಗಳ ಸಂಯಮದ ವರ್ತನೆಯನ್ನು ಖಾತರಿಪಡಿಸಲು ಹಾಗೂ ಯಾವುದೇ ತಪ್ಪು ಅಭಿಪ್ರಾಯ ಮತ್ತು ತಪ್ಪು ಲೆಕ್ಕಾಚಾರಕ್ಕೆ ಆಸ್ಪದ ನೀಡದಿರಲು ಉಭಯ ಸೇನೆಗಳು ಒಪ್ಪಿಕೊಂಡಿವೆ . ಮಿಲಿಟರಿ ಮತ್ತು ರಾಜತಾಂತ್ರಿಕ ಕ್ರಮಗಳ ಮೂಲಕ ಮಾತುಕತೆ ಮುಂದುವರಿಸಲು ಮತ್ತು ಬಾಕಿ ಉಳಿದ ವಿಷಯಗಳನ್ನು ಇತ್ಯರ್ಥಪಡಿಸಲೂ ಮಾತುಕತೆ ನಡೆಸಲು ಸಹಮತಕ್ಕೆ ಬರಲಾಗಿದೆ ಎಂದು ಭಾರತ-ಚೀನಾ ಸೇನಾಪಡೆಯ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಂಟನೇ ಸುತ್ತಿನ ಮಾತುಕತೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಲೆಜ ಪಿಜಿಕೆ ಮೆನನ್ ವಹಿಸಿದ್ದರೆ, ವಿದೇಶ ವ್ಯವಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ( ಪೂರ್ವ ಏಶ್ಯಾ) ನವೀನ್ ಶ್ರೀವಾಸ್ತವ ಕೂಡಾ ಭಾಗವಹಿಸಿದ್ದರು.

 ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಭಾರತದ ಪ್ರದೇಶ ಚುಷುಲ್‌ನಲ್ಲಿ ಶುಕ್ರವಾರ ಉಭಯ ಸೇನೆಗಳ ಮಧ್ಯೆ ಉಭಯ ಸೇನೆಗಳ ಮಧ್ಯೆ 8ನೇ ಸುತ್ತಿನ ಮಾತುಕತೆ ನಡೆದಿದ್ದು, ಭಾರತ-ಚೀನಾ ಗಡಿಭಾಗದ ಪಶ್ಚಿಮ ಕ್ಷೇತ್ರದಲ್ಲಿ ಸೇನೆಯ ವಾಪಸಾತಿಯ ಬಗ್ಗೆ ರಚನಾತ್ಮಕವಾಗಿ ಚರ್ಚೆ ನಡೆದಿದೆ. ಹಾಲಿ ಬಿಕ್ಕಟ್ಟಿನ ಜೊತೆಗೆ, ಬಾಕಿ ಉಳಿದಿರುವ ಇತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಗಡಿ ಭಾಗದಲ್ಲಿ ಶಾಂತಿ, ನೆಮ್ಮದಿಯನ್ನು ಕಾಯ್ದುಕೊಳ್ಳಲು ಉಭಯ ದೇಶಗಳೂ ಸಹಮತ ಸೂಚಿಸಿದೆ.

 ಪೂರ್ವ ಲಡಾಖ್‌ನಲ್ಲಿ ಘರ್ಷಣೆ ನಡೆದಿರುವ ಎಲ್ಲಾ ಸ್ಥಳಗಳಿಂದಲೂ ಚೀನಾದ ಸೇನೆ ತಕ್ಷಣ ಹಿಂದಕ್ಕೆ ಸರಿದರೆ ಮಾತ್ರ ಮಾತುಕತೆಯಲ್ಲಿ ಪ್ರಗತಿ ಮೂಡಬಹುದು ಎಂದು ಸಭೆಯಲ್ಲಿ ಭಾರತದ ಸೇನೆ ಬಲವಾಗಿ ಪ್ರತಿಪಾದಿಸಿದೆ ಎಂದು ಸರಕಾರದ ಮೂಲಗಳು ಹೇಳಿವೆ. ಲಡಾಖ್‌ನ ವಿವಿಧ ಪರ್ವತ ಪ್ರದೇಶಗಳಲ್ಲಿ ಕೊರೆಯುವ ಚಳಿಯಲ್ಲೂ ಸುಮಾರು 50,000 ಭಾರತೀಯ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೀನಾವೂ ಇಷ್ಟೇ ಪ್ರಮಾಣದ ಸೈನಿಕರನ್ನು ನಿಯೋಜಿಸಿದೆ ಎಂದು ಮೂಲಗಳು ಹೇಳಿವೆ.

  ಕಳೆದ ಸೆಪ್ಟಂಬರ್‌ನಲ್ಲಿ ಮಾಸ್ಕೋದಲ್ಲಿ ಆಯೋಜಿಸಿದ್ದ ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದ ನೇಪಥ್ಯದಲ್ಲಿ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹಾಗೂ ಚೀನಾ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ಮಧ್ಯೆ ನಡೆದಿದ್ದ ಸಭೆಯಲ್ಲಿ, ಐದು ಅಂಶಗಳ ಒಪ್ಪಂದ ಸೂತ್ರಕ್ಕೆ ಸಹಿ ಹಾಕಲಾಗಿದೆ. ಉಭಯ ದೇಶಗಳೂ ತಕ್ಷಣ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಉದ್ವಿಗ್ನತೆ ಹೆಚ್ಚಲು ಕಾರಣವಾಗುವ ಉಪಕ್ರಮಗಳನ್ನು ನಿವಾರಿಸುವುದು, ಗಡಿ ನಿರ್ವಹಣೆಯ ಕುರಿತ ಶಿಷ್ಟಾಚಾರ ಮತ್ತು ನಿಯಮದ ಪಾಲನೆ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುವುದು ಈ ಒಪ್ಪಂದದಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News