×
Ad

ಬಿಜೆಪಿಯ ‘ವೇಲ್ ಯಾತ್ರೆ’ಯಿಂದ ಟ್ರಾಫಿಕ್ ಜಾಮ್: ಅರ್ಧ ಗಂಟೆ ರಸ್ತೆಯಲ್ಲಿ ಸಿಲುಕಿಕೊಂಡ ಆ್ಯಂಬುಲೆನ್ಸ್

Update: 2020-11-08 22:56 IST

ಚೆನ್ನೈ, ನ. 8: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿರುವ ನಿಷೇಧ ಉಲ್ಲಂಘಿಸಿ ರಾಜ್ಯದ ಮುರುಗನ್ ದೇವಾಲಯಕ್ಕೆ ಭೇಟಿ ನೀಡುವ ಒಂದು ತಿಂಗಳ ರಾಜಕೀಯ ರ್ಯಾಲಿ ‘ವೇಲ್ ಯಾತ್ರೆ’ಯನ್ನು ಬಿಜೆಪಿ ವರಿಷ್ಠ ಎಲ್. ಮುರುಗನ್ ರವಿವಾರ ಆರಂಭಿಸಿದ ಬಳಿಕ ಚೆನ್ನೈಯ ಪೂನಾಮಲ್ಲೀ ಹೈ ರಸ್ತೆಯಲ್ಲಿ ಸಂಚಾರ ತಡೆ ಉಂಟಾಗಿ ಆ್ಯಂಬುಲೆನ್ಸ್ ಒಂದು ಗಂಟೆಗಳ ಕಾಲ ಸಿಲುಕಿಕೊಂಡಿತ್ತು.

ಇದು ತನ್ನ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿ ಮುರುಗನ್‌ನ ಅವರು ಇಂದು ಬೆಳಗ್ಗೆ ರ್ಯಾಲಿ ಆರಂಭಿಸಿದರು. ‘‘ರಾಜ್ಯ ಸರಕಾರ ಇತರ ಪಕ್ಷಗಳ ರ್ಯಾಲಿ ಹಾಗೂ ಪ್ರತಿಭಟನೆಗೆ ಅವಕಾಶ ನೀಡುತ್ತಿದೆ. ಇದು ನನ್ನ ಸಾಂವಿಧಾನಿಕ ಹಕ್ಕು’’ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ‘ವೇಲ್ ಯಾತ್ರೆ’ ಆರಂಭಿಸಲು ಯತ್ನಿಸಿದ ಬಳಿಕ ಪಕ್ಷದ ಇತರ ಹಿರಿಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಮುರುಗನ್ ಅವರನ್ನು ಬಂಧಿಸಲಾಗಿತ್ತು. ಅನಂತರ ತಿರುಟ್ಟಾನಿ ಸಭಾ ಭವನದಲ್ಲಿ ಅವರನ್ನು ಇರಿಸಲಾಗಿತ್ತು. ಸಂಜೆ ಬಿಡುಗಡೆ ಮಾಡಲಾಗಿತ್ತು.

 ‘‘ನಾವು ತಮಿಳು ಹಿಂದೂಗಳು ಇತರ ಧರ್ಮಗಳಿಗೆ ಗೌರವ ನೀಡುತ್ತೇವೆ. ಆದರೆ, ಹಿಂದೂ ಧರ್ಮ, ದೇವರನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಿದಾಗ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಹಿಂದೂ ದೇವರು ಹಾಗೂ ತಮಿಳು ದೇವರ ವಿರುದ್ಧ ಮಾತನಾಡುತ್ತಾರೆ. ಅದು ಅವರ ಮುಖ್ಯ ವೃತ್ತಿ. ನನ್ನ ನಂಬಿಕೆ, ನಾನು ನಂಬುವ ದೇವರು, ನನ್ನ ಸ್ಥಳೀಯ ದೇವರನ್ನು ಪ್ರಶ್ನಿಸಲು ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳಿಗೆ ಯಾವುದೇ ಹಕ್ಕು ಇಲ್ಲ’’ ಎಂದು ಅವರು ಹೇಳಿದ್ದರು.

 ಮುರುಗನ್ ಅವರು ಮಾತನಾಡಿದ ಬಳಿಕ ಯಾತ್ರೆ ಆರಂಭಿಸಲು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮುಂದುವರಿದಾಗ ಪೊಲೀಸರು ಅವರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News