ನೋಟು ರದ್ದತಿ, ಜಿಎಸ್‌ಟಿ ಬಗ್ಗೆ ಕೇಂದ್ರ ಶ್ವೇತಪತ್ರ ಹೊರಡಿಸಬೇಕು: ಗೆಹ್ಲೋಟ್

Update: 2020-11-08 18:27 GMT

 ಜೈಪುರ, ನ.9: ಅಧಿಕ ಮುಖಬೆಲೆಯ ನೋಟು ರದ್ದತಿ, ಕೊರೋನ ಸೋಂಕು ಹಾಗೂ ಜಿಎಸ್‌ಟಿ ಜಾರಿಯಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮದ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ.

   ನೋಟು ರದ್ಧತಿಯ ನಾಲ್ಕನೇ ವರ್ಷಾಚರಣೆಯನ್ನು ಕಾಂಗ್ರೆಸ್ ಪಕ್ಷ ‘ವಿಶ್ವಾಸಘಾತ ದಿವಸ’ ಎಂದು ಆಚರಿಸುತ್ತಿದ್ದು, ಆನ್‌ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೋಟು ರದ್ದತಿ ಅಪಾಯಕಾರಿ ಕ್ರಮವಾಗಿದ್ದು ಇದರ ಜೊತೆಗೆ ಜಿಎಸ್‌ಟಿ ಜಾರಿಯ ನಿರ್ಧಾರ ಮತ್ತು ಕೊರೋನ ವೈರಸ್ ಸಾಂಕ್ರಾಮಿಕದ ಸಮಸ್ಯೆ ಆರ್ಥಿಕತೆಯ ಮೇಲೆ ಮಾರಕ ಆಘಾತ ನೀಡಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ನೋಟು ರದ್ಧತಿಯ ಬಳಿಕ ದೇಶದಲ್ಲಿ ಕಪ್ಪು ಹಣದ ಸಮಸ್ಯೆ, ಭಯೋತ್ಪಾದನೆ ಸಮಸ್ಯೆ ಅಥವಾ ನಕ್ಸಲಿಸಂ ಅಂತ್ಯವಾಗಿದೆಯೇ, ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣ ಭಾರತಕ್ಕೆ ಮರಳಿದೆಯೇ ಎಂಬ ಮಾಹಿತಿ ಜನಕ್ಕೆ ತಿಳಿಯಬೇಕಿದೆ ಎಂದವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನೋಟು ರದ್ಧತಿಯ ನಿರ್ಧಾರದ ಬಳಿಕ ದೇಶದ ರೈತರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ದುರ್ಗತಿ ಬಂದಿದೆ. ಜಿಎಸ್‌ಟಿ ಜಾರಿಗೆ ಬಂದಿದ್ದರೂ ರಾಜ್ಯಗಳ ಪಾಲು ದೊರಕುತ್ತಿಲ್ಲ. ಇದು ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯವಾಗಿದೆ . ಆದ್ದರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ಪದೇ ಪದೇ ಎಚ್ಚರಿಸುತ್ತಿದೆ ಎಂದರು.

ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಗುಜ್ಜರ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಸಮುದಾಯದ ಬಹುತೇಕ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಿದೆ. ಸರಕಾರ ಗುಜ್ಜರ್ ಸಮುದಾಯದ ಮುಖಂಡ ಕಿರೋಜಿ ಸಿಂಗ್ ಜೊತೆ ಮಾತುಕತೆ ನಡೆಸಿದೆ. ಆದರೆ ಜನರು ರೈಲು ಹಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು. ರಾಜ್ಯ ಸರಕಾರ ನೇಮಿಸಿರುವ ಸಮಿತಿಯ ಜತೆ ಗುಜ್ಜಾರ್ ಮುಖಂಡರು ಮಾತುಕತೆಗೆ ಮುಂದಾಗಲಿ ಎಂದವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News