"ನಾವು ಏನೂ ತಪ್ಪು ಮಾಡಿಲ್ಲ'': ಆತ್ಮಹತ್ಯೆಗೆ ಮುನ್ನ ಸೆಲ್ಫೀ ವೀಡಿಯೋ ಮಾಡಿದ ಕುಟುಂಬ

Update: 2020-11-09 10:37 GMT

ಕುರ್ನೂಲ್: ತಾನು ಮಾಡದ ಕಳ್ಳತನಕ್ಕಾಗಿ ನಂದ್ಯಾಲ್ ಪೊಲೀಸರ ಕಿರುಕುಳ ಹಾಗೂ ನಿಂದನೆ ತಾಳಲಾರದೆ ಸಾಯಲು ನಿರ್ಧರಿಸಿರುವುದಾಗಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆಗಿನ ಸೆಲ್ಫೀ ವೀಡಿಯೋದಲ್ಲಿ ಕಣ್ಣೀರಿನೊಂದಿಗೆ ಹೇಳಿಕೊಂಡ ವ್ಯಕ್ತಿಯೊಬ್ಬ ನಂತರ ಕುಟುಂಬ ಸಮೇತ ಕಲವಳೂರು ಗ್ರಾಮದಲ್ಲಿ ರೈಲಿನಡಿಗೆ  ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವ್ಯಾಪಕ ಆಕ್ರೋಶ ಸೃಷ್ಟಿಸಿದೆ.  ಅವರು ಸಾಯುವ ಮುನ್ನ ಮಾಡಿದ ವೀಡಿಯೋ ಶನಿವಾರ ಬಹಿರಂಗಗೊಂಡು ವೈರಲ್ ಆಗುತ್ತಿದ್ದಂತೆಯೇ ರವಿವಾರ ಪೊಲೀಸರು ವೃತ್ತ ನಿರೀಕ್ಷಕ ಹಾಗೂ ಹೆಡ್ ಕಾನ್‍ಸ್ಟೇಬಲ್ ಒಬ್ಬರನ್ನು ಬಂಧಿಸಿದ್ದಾರೆ. ಮೃತರನ್ನು ಅಬ್ದುಲ್ ಸಲಾಂ (45), ಆತನ ಪತ್ನಿ ನೂರ್ ಜಹಾನ್ (38), ಪುತ್ರಿ ಸಲ್ಮಾ (14) ಹಾಗೂ ಪುತ್ರ ದಧಿ ಕಲಂದರ್ (10) ಎಂದು ಗುರುತಿಸಲಾಗಿದೆ.

"ನಾನೇನೂ ತಪ್ಪು ಮಾಡಿಲ್ಲ. ಆಟೋರಿಕ್ಷಾದಲ್ಲಿ ಹಾಗೂ ಅಂಗಡಿಯಲ್ಲಿ ನಡೆದ ಕಳ್ಳತನಕ್ಕೂ ನನಗೂ ಸಂಬಂಧವಿಲ್ಲ. ನನಗೆ ಕಿರುಕುಳ ಸಹಿಸಲಾಗುತ್ತಿಲ್ಲ. ನಮಗೆ ಸಹಾಯ ಮಾಡಲು ಯಾರೂ ಇಲ್ಲ. ಕನಿಷ್ಠ ಸಾವು ನಮಗೆ ಮನಃಶಾಂತಿ ನೀಡಬಹುದು,'' ಎಂದು ಅವರು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಈ ಹಿಂದೆ ನಂದ್ಯಾಲ್‍ನ ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಅಬ್ದುಲ್ ಅಂಗಡಿಯಿಂದ 3 ಕೆಜಿ ಚಿನ್ನ ಕದ್ದಿದ್ದಾನೆಂದು ಆರೋಪಿಸಲಾಗಿತ್ತು. ನಂತರ ಆತನ ಮನೆಯಲ್ಲಿ 500 ಗ್ರಾಂ ಚಿನ್ನಾಭರಣೆ ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಬಿಡುಗಡೆಗೊಂಡ ನಂತರ ಆತ ಆಟೋ ಚಾಲಕನಾಗಿ ದುಡಿಯುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ  ಆತನ ಆಟೋದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬ ರೂ 70,000 ನಗದು ಕಳ್ಳತನದ ಕುರಿತು ದೂರು ನೀಡಿದ್ದ. ಈ ಸಂಬಂಧ ಪೊಲೀಸರು ವಿಚಾರಣೆಗಾಗಿ ಬರ ಹೇಳಿದ್ದರು. ಇದರಿಂದ ನೊಂದಿದ್ದ ಅಬ್ದುಲ್ ಕುಟುಂಬ ರೈಲಿನಡಿ ಹಾರಿ ಆತ್ಮಹತ್ಯೆ ಮಾಡಿಕೊಂಡಿತ್ತು ಎನ್ನಲಾಗಿದೆ.

ಅವರು ಸಾಯುವ ಮುನ್ನ ಮಾಡಿದ್ದ ಸೆಲ್ಫೀ ವೀಡಿಯೋ ಶನಿವಾರ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಈ ಕುರಿತು ತನಿಖೆಗೆ ಹಿರಿಯಾಧಿಕಾರಿಗಳಿಗೆ ಆದೇಶಿಸಿದ್ದ ನಂತರ ಇಬ್ಬರು ಪೊಲೀಸರ ಬಂಧನವಾಗಿದೆ.

ಅಬ್ದುಲ್ ಕುಟುಂಬಕ್ಕೆ ಸೇರಿದ ಚಿನ್ನಾಭರಣಗಳನ್ನೇ ವಶಪಡಿಸಿಕೊಂಡು ಅದು ಕದ್ದ ಚಿನ್ನಾಭರಣ ಎಂದು ಪೊಲೀಸರು ಆರೋಪಿಸಿದ್ದರು ಎಂದು ಅಬ್ದುಲ್ ಸಂಬಂಧಿಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಶಾಲಾ ಶಿಕ್ಷಕಿಯಾಗಿರುವ ಆತನ ಪತ್ನಿಯ ಕುರಿತೂ ಅಸಭ್ಯವಾಗಿ ಮಾತನಾಡಿದ್ದರು ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News