×
Ad

'ಮಾಧ್ಯಮ ವಿಚಾರಣೆ' ವಿರುದ್ಧ ಬಾಲಿವುಡ್ ಸಂಸ್ಥೆಗಳ ಅಪೀಲು: ರಿಪಬ್ಲಿಕ್, ಟೈಮ್ಸ್ ನೌಗೆ ಹೈಕೋರ್ಟ್ ನೋಟಿಸ್

Update: 2020-11-09 14:56 IST

ಹೊಸದಿಲ್ಲಿ: ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ಸುದ್ದಿ ವಾಹಿನಿಗಳು "ಚಿತ್ರರಂಗದ ವ್ಯಕ್ತಿಗಳ ವಿರುದ್ಧ 'ಮಾಧ್ಯಮ ವಿಚಾರಣೆ' ನಡೆಸುವುದನ್ನು ಹಾಗೂ ಅವರ ಖಾಸಗಿತನದ ಹಕ್ಕು ಕುರಿತಂತೆ ಹಸ್ತಕ್ಷೇಪ ನಡೆಸುವುದನ್ನು ತಡೆಯಬೇಕು ಎಂದು ಬಾಲಿವುಡ್‍ನ 34 ಪ್ರಮುಖ ನಿರ್ಮಾಪಕರು ಹಾಗೂ ನಾಲ್ಕು ಸಂಘಟನೆಗಳು ಸಲ್ಲಿಸಿರುವ ಅಪೀಲನ್ನು ಪರಿಶೀಲಿಸಿರುವ ದಿಲ್ಲಿ ಹೈಕೋರ್ಟ್ ಸೋಮವಾರ ಎರಡೂ ಸುದ್ದಿ ವಾಹಿನಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಯಾವುದೇ 'ಮಾನಹಾನಿಕರ' ವಿಚಾರಗಳನ್ನು ಪೋಸ್ಟ್ ಮಾಡಬಾರದು ಹಾಗೂ ಅವುಗಳನ್ನು ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡಬಾರದು ಎಂದು ಜಸ್ಟಿಸ್ ರಾಜೀವ್ ಶಕ್ದರ್ ಅವರ ನೇತೃತ್ವದ ಪೀಠ ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ವಾಹಿನಿಗೆ ಸೂಚನೆ ನೀಡಿದೆ. ಈ ಎರಡೂ ವಾಹಿನಿಗಳು ಇನ್ನು ಮುಂದೆ ನಿಯಮವನ್ನು ಪಾಲಿಸುತ್ತವೆ ಎಂದು ನಿರೀಕ್ಷಿಸುತ್ತೇನೆ ಎಂದು ಜಸ್ಟಿಸ್ ರಾಜೀವ್ ಅವರು ಮೌಖಿಕ ಸೂಚನೆ ವೇಳೆ ತಿಳಿಸಿದರು.

ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣ ಹಾಗೂ ನಂತರ ಆತನ ಗೆಳತಿ ರಿಯಾ ಚಕ್ರವರ್ತಿ ಬಂಧನದ ಕುರಿತಾದ ಬೆಳವಣಿಗೆಗಳಲ್ಲಿ ಈ ಎರಡೂ ವಾಹಿನಿಗಳು ಬಾಲಿವುಡ್‍ನ ಹಲವರ ವಿರುದ್ಧ `ಬೇಜವಾಬ್ದಾರಿಯುತ, ನಿಂದನಾತ್ಮಕ' ಹೇಳಿಕೆಗಳನ್ನು ನೀಡಿವೆ ಹಾಗೂ ಹಲವರನ್ನು `ಕ್ರಿಮಿನಲ್'ಗಳು ಎಂದು ಬಣ್ಣಿಸಿವೆ ಎಂದು ಅಪೀಲಿನಲ್ಲಿ ತಿಳಿಸಲಾಗಿತ್ತು.

ಅಕ್ಟೋಬರ್ 12ರಂದು ಸಲ್ಲಿಸಲಾಗಿರುವ ಈ ಅಪೀಲಿನಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ಸಲಹಾ ಸಂಪಾದಕ ಪ್ರದೀಪ್ ಭಂಡಾರಿ, ಟೈಮ್ಸ್ ನೌ ಮುಖ್ಯ ಸಂಪಾದಕ ರಾಹುಲ್ ಶಿವಶಂಕರ್ ಹಾಗೂ  ಗ್ರೂಪ್ ಎಡಿಟರ್ (ರಾಜಕೀಯ) ನವಿಕಾ ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.

ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ನಿಗದಿ ಪಡಿಸಲಾಗಿದೆ. ಅಪೀಲು ಸಲ್ಲಿಸಿದ ಸಂಸ್ಥೆಗಳ ಪೈಕಿ ಸಲ್ಮಾನ್ ಖಾನ್, ಆಮಿರ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್, ಫರ್ಹಾನ್ ಅಖ್ತರ್ ಹಾಗು ಅಜಯ್ ದೇವಗನ್ ಅವರ ನಿರ್ಮಾಣ ಸಂಸ್ಥೆಗಳೂ ಸೇರಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News