ಅರ್ನಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್

Update: 2020-11-09 16:41 GMT

ಮುಂಬೈ,ನ.9: ಎರಡು ವರ್ಷಗಳ ಹಿಂದೆ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ಕಳೆದ ವಾರ ಬಂಧನದ ಬೆನ್ನಿಗೇ ಗೋಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ನಿಯಮಿತ ಜಾಮೀನಿಗಾಗಿ ಮಹಾರಾಷ್ಟ್ರದ ಅಲಿಬಾಗ್ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಗೋಸ್ವಾಮಿಗೆ ಸೂಚಿಸಿದ ಪೀಠವು, ತನ್ನ ನಿರ್ಧಾರವು ಸೆಷನ್ಸ್ ನ್ಯಾಯಾಲಯದ ಕಲಾಪಗಳ ಮೇಲೆ ಯಾವುದೇ ಪರಿಣಾಮವನ್ನು ಹೊಂದಿರುವುದಿಲ್ಲ ಎಂದು ತಿಳಿಸಿತು. ಜಾಮೀನು ಅರ್ಜಿಯನ್ನು ನಾಲ್ಕು ದಿನಗಳಲ್ಲಿ ಇತ್ಯರ್ಥಗೊಳಿಸುವಂತೆ ಅದು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶ ನೀಡಿದೆ.

ನ್ಯಾಯಾಲಯದ ನಿರ್ಧಾರಕ್ಕೆ ಅನುಗುಣವಾಗಿ ಗೋಸ್ವಾಮಿ ಸೋಮವಾರವೇ ಅಲಿಬಾಗ್ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.

 ತನ್ನನ್ನು ತಕ್ಷಣ ಬಂಧನದಿಂದ ಬಿಡುಗಡೆಗೊಳಿಸುವಂತೆ ಕೋರಿದ್ದ ಗೋಸ್ವಾಮಿ, ನ.4ರಂದು ತನ್ನನ್ನು ಬಂಧಿಸಿದ ಕ್ರಮದ ಕಾನೂನುಬದ್ಧತೆಯನ್ನೂ ಪ್ರಶ್ನಿಸಿದ್ದರು. ರಾಜ್ಯ ಸರಕಾರ ಮತ್ತು ಮಹಾರಾಷ್ಟ್ರ ತನ್ನ ವಿರುದ್ಧ ಸೇಡಿನ ಕ್ರಮಗಳನ್ನು ಕೈಗೊಂಡಿವೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

ಕಾಂಕರ್ಡ್ ಡಿಸೈನ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿದ್ದ ನಾಯ್ಕ್ ಅವರಿಗೆ ಬಾಕಿಯಿರಿಸಿದ್ದ ಹಣವನ್ನು ಪಾವತಿಸಲು ಗೋಸ್ವಾಮಿ, ಫಿರೋಝ್ ಶೇಖ್ ಮತ್ತು ನಿತೇಶ್ ಸಾರ್ಡಾ ಅವರು ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ. 2018ರಲ್ಲಿ ನಾಯ್ಕ್ ಮತ್ತು ಅವರ ತಾಯಿಯ ಶವಗಳು ಮುಂಬೈ ಸಮೀಪದ ಕವೀರ್ ಗ್ರಾಮದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಗೊಸ್ವಾಮಿ,ಶೇಖ್ ಮತ್ತು ಸಾರ್ಡಾ ತನಗೆ 5.40 ಕೋ.ರೂ.ಗಳನ್ನು ಪಾವತಿಸಿಲ್ಲ ಎಂದು ನಾಯ್ಕ್ ಆತ್ಮಹತ್ಯಾ ಚೀಟಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News