ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬ: ಕಂಗಾಲಾದ ವಿದ್ಯಾರ್ಥಿನಿ ಆತ್ಮಹತ್ಯೆ; ಆರೋಪ

Update: 2020-11-09 10:36 GMT

ಹೈದರಾಬಾದ್ : ಕುಟುಂಬದ ಆರ್ಥಿಕ ಸಮಸ್ಯೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ಎಲ್ಲಿ ತೊಡಕುಂಟಾಗುವುದೋ ಎಂದು ತೀವ್ರ ಮನನೊಂದು ಕಳೆದ ವಾರ ಹೈದರಾಬಾದ್‍ನ ಶಾದ್ನಗರ್ ನಲ್ಲಿನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರತಿಭಾನ್ವಿತ ಬಿಎಸ್ಸಿ ವಿದ್ಯಾರ್ಥಿನಿ ಐಶ್ವರ್ಯಾ ರೆಡ್ಡಿಯ ಕುಟುಂಬ ಆಕೆಯನ್ನು ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದೆ.

ರಂಗಾರೆಡ್ಡಿ ಜಿಲ್ಲೆಯಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿರುವ ಆಕೆಯ ತಂದೆ ಶ್ರೀನಿವಾಸ್ ರೆಡ್ಡಿ ಹೇಳುವಂತೆ ಐಶ್ವರ್ಯ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಳು. ಕೋವಿಡ್ ಸಂದರ್ಭ ಆನ್‍ಲೈನ್ ತರಗತಿಗೆ ಹಾಜರಾಗಲು ಅನುಕೂಲಕರವಾಗಲು ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್ ಖರೀದಿಸಿ ಕೊಡುವಂತೆ ಆಕೆ ಕೇಳಿಕೊಂಡಿದ್ದರೂ ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

''ನನ್ನಿಂದ ನನ್ನ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ನಾನು ನನ್ನ ಕುಟುಂಬಕ್ಕೆ ಹೊರೆಯಾಗಿದ್ದೇನೆ. ನನ್ನ ಶಿಕ್ಷಣವೂ ಒಂದು ಹೊರೆಯಾಗಿದೆ.  ನನಗೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದೇ ಇದ್ದರೆ ಬದುಕಲು ಸಾಧ್ಯವಿಲ್ಲ,'' ಎಂದು ಆಕೆ ತನ್ನ ಸುಸೈಡ್ ನೋಟಿನಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಹನ್ನೆರಡನೇ ತರಗತಿಯಲ್ಲಿ ಶೇ 98.5 ಅಂಕಗಳನ್ನು ಪಡೆದಿದ್ದ ಐಶ್ವರ್ಯಳನ್ನು ಪ್ರತಿಷ್ಠಿತ ಕಾಲೇಜಿಗೆ ಸೇರಿಸಲೆಂದು ತನ್ನ ಒಂದು ಬೆಡ್‍ರೂಂ ಮನೆಯನ್ನು ರೂ. 2 ಲಕ್ಷಕ್ಕೆ ಅಡವಿಟ್ಟಿರುವ ಕುರಿತು ಆಕೆಯ ತಂದೆ ಹೇಳುತ್ತಾರೆ.

ಲಾಕ್ ಡೌನ್ ಸಂದರ್ಭ ಮೋಟಾರ್ ಸೈಕಲ್ ದುರಸ್ತಿ ಅಂಗಡಿಯನ್ನೂ ಅವರು ಬಂದ್ ಮಾಡಬೇಕಾಯಿತು. ಈಗ ಅದನ್ನು ತೆರೆಯಲಾಗಿದ್ದರೂ ವ್ಯಾಪಾರ ಹಿಂದಿನಂತಿಲ್ಲ.  ಐಶ್ವರ್ಯ ಶಿಕ್ಷಣಕ್ಕೆ ತೊಡಕುಂಟಾಗದೇ ಇರಲೆಂದು ಕಿರಿಯ ಪುತ್ರಿಯ ಶಿಕ್ಷಣವನ್ನು ಕುಟುಂಬ ಅರ್ಧಕ್ಕೆ ನಿಲ್ಲಿಸಿತ್ತು. ಐಶ್ವರ್ಯ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಇನ್‍ಸ್ಪೈರ್ ವಿದ್ಯಾರ್ಥಿವೇತನವನ್ನೂ ಪಡೆದಿದ್ದಳು ಅದು ದೊರೆಯುವುದು ವಿಳಂಬವಾಗಿತ್ತು ಎಂದು ಆಕೆಯ ತಂದೆ ಹೇಳುತ್ತಾರೆ.

ಅಕ್ಟೋಬರಿನಲ್ಲಿ ಆಕೆಯ ಹಾಸ್ಟೆಲ್ ಕೊಠಡಿಯನ್ನು ತೆರವುಗೊಳಿಸುವಂತೆ ಆಕೆಗೆ  ಸೂಚನೆ ಬಂದಿದ್ದರಿಂದಲೂ ಆಕೆ ನೊಂದಿದ್ದಳು.  ಆಕೆಯ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಸವಲತ್ತು ಒದಗಿಸುತ್ತಿದೆ. ಪ್ರತ್ಯೇಕ ಬಾಡಿಗೆ ಕೊಠಡಿಗೆ ಕನಿಷ್ಠ ರೂ 15000 ಆದರೂ ನೀಡಬೇಕಿತ್ತು ಆಕೆಯನ್ನು ದಿಲ್ಲಿಗೆ ಕಳುಹಿಸಲು ರೈಲಿನ ಟಿಕೆಟ್‍ಗೂ ನಮ್ಮ ಬಳಿ ಹಣವಿರಲಿಲ್ಲ ಎಂದು ಕುಟುಂಬ ಹೇಳುತ್ತಿದೆ.

ಲಾಕ್ ಡೌನ್ ಸಂದರ್ಭ ಹಲವರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್‍ಗೂ ಐಶ್ವರ್ಯ ತನ್ನ ಕಷ್ಟ ವಿವರಿಸಿ ಸಂದೇಶ ಕಳುಹಿಸಿದ್ದಳೆಂದು ಕುಟುಂಬ ಹೇಳಿದೆ.

ತಾನು ಹಾಸ್ಟೆಲ್ ಕೊಠಡಿ ತೆರವುಗೊಳಿಸುವುದಾಗಿ ಅಕ್ಟೋಬರ್ 31ರಂದು ಆಕೆ ತನ್ನ ಹಾಸ್ಟೆಲ್ ವಾರ್ಡನ್‍ಗೆ ಸಂದೇಶ ಕಳುಹಿಸಿದ್ದಳು. ಆದರೆ ನವೆಂಬರ್ 2ರಂದು ಆಕೆ ತನ್ನ ಮನೆಯಲ್ಲಿಯೇ ಆತ್ಮಹತ್ಯೆಗೈದಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News